ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ಹರಿಕಾರ

ಕ್ಷೇತ್ರಕ್ಕೆ ವಿಶ್ವಖ್ಯಾತಿ ದೊರಕಿಸಿದ ಆದರ್ಶ ರಾಜಕಾರಣಿ ಜನಾರ್ದನ ಪೂಜಾರಿ

ರಾಜಕೀಯ ಕ್ಷೇತ್ರದಲ್ಲಿ ಇಂದು ಅಧಿಕಾರ  ಇದ್ದಾಗ ಮಾತ್ರ  ರಾಜಕಾರಣಿಗಳು ಜನಪ್ರಿಯತೆ ಗೌರವ ಪಡೆಯುತ್ತಾರೆ. ಎಷ್ಟೇ ದೊಡ್ಡ ರಾಜಕಾರಣಿಯಾದರೂ ಅವರಲ್ಲಿ ಯಾವುದೇ ಅಧಿಕಾರ ಇಲ್ಲದಿದ್ದರೆ ಅವರನ್ನು ಯಾರೂ ಕೂಡ ನೆನಪಿಸುವುದಿಲ್ಲ, ಗೌರವಿಸುವುದಿಲ್ಲ. ಆದರೆ ರಾಜಕೀಯದಲ್ಲಿ ಇಂದು ತಾನು ಯಾವುದೇ ಅಧಿಕಾರ ಹೊಂದಿಲ್ಲದಿದ್ದರೂ, ತನ್ನ ಘನತೆ, ಆದರ್ಶ ವ್ಯಕ್ತಿತ್ವದಿಂದ ಇಂದಿಗೂ ಜನಸಮುದಾಯದಿಂದ ಗೌರವಿಸಲ್ಪಡುತ್ತಿರುವ ಓರ್ವ ಅಪೂರ್ವ ಮಾದರಿ ರಾಜಕಾರಣಿಯಾಗಿ ಜನಮಾನಸದಲ್ಲಿ ನೆಲೆ ನಿಂತವರು ಜನಾರ್ದನ ಪೂಜಾರಿಯವರು.

ತನ್ನ ನೇರ ನಡೆನುಡಿ, ಶುದ್ಧ ಚಾರಿತ್ರ್ಯ, ಸತ್ಯ ಪ್ರಾಮಾಣಿಕತೆಯಿಂದ ರಾಜಕೀಯಕ್ಕೆ ಹೊಸ ಭಾಷ್ಯ ಬರೆದವರು. ದೇಶದ ಬಡಜನತೆಯ ಸೇವೆಯೊಂದಿಗೆ, ಸಾಮಾಜಿಕ, ಧಾರ್ಮಿಕ ಕ್ಷೇತ್ರದಲ್ಲಿ ತಾನು ಸಲ್ಲಿಸುತ್ತಿರುವ ಸೇವಾ ಕಾರ್ಯಗಳಿಂದ ಜನಾರ್ದನ ಪೂಜಾರಿಯವರು ಇಂದಿಗೂ ಸಮಾಜದ ಮೇಲೆ ಗಾಢವಾದ ಪ್ರಭಾವ ಬೀರಬಲ್ಲ ಮೇರು ವ್ಯಕ್ತಿತ್ವದ ನಾಯಕರಾಗಿ ಜನಪ್ರಿಯತೆ ಪಡೆದು ದೇಶದ ಆದರ್ಶ ರಾಜಕಾರಣಿಯೆನಿಸಿದ್ದಾರೆ.

ಅಭೂತಪೂರ್ವವಾಗಿ ನವೀಕರಣ ಶತಮಾನಗಳ ಹಿಂದೆ ಬ್ರಹ್ಮಶ್ರೀ ನಾರಾಯಣಗುರುಗಳು ಮಂಗಳೂರಿನ ಕುದ್ರೋಳಿಯಲ್ಲಿ ಶ್ರೀ ಗೋಕರ್ಣನಾಥನನ್ನು ಪ್ರತಿಷ್ಠಾಪನೆ ಮಾಡುವ ಮೂಲಕ ದೇವರ ಪೂಜೆಯ, ದೇವಾಲಯ ಪ್ರವೇಶದ ಅವಕಾಶ ವಂಚಿತರಿಗೆ ದೇವರ ದರ್ಶನದ ಭಾಗ್ಯ ಕರುಣಿಸಿದರು. ಇಂದು ಜನಾರ್ದನ ಪೂಜಾರಿಯವರು ತನ್ನ ಅಪೂರ್ವ ಇಚ್ಛಾಶಕ್ತಿಯಿಂದ ಶ್ರೀ ಗೋಕರ್ಣನಾಥ ಕ್ಷೇತ್ರವನ್ನು ಅಭೂತಪೂರ್ವವಾಗಿ ನವೀಕರಿಸಿ, ಅಲ್ಲಿ ಸ್ವರ್ಗ ಧರೆಗಿಳಿದು ಬಂದಂತೆ ಕಾಣುವ ರೀತಿಯ ಚೆಲುವನ್ನು ಸೃಷ್ಟಿಸಿ, ಇಡೀ ವಿಶ್ವವೇ ಶ್ರೀ ಕ್ಷೇತ್ರದತ್ತ ಗಮನ ಸೆಳೆಯುವಂತೆ ಅಭಿವೃದ್ಧಿಪಡಿಸಿದರು.

     ನವೀಕರಣಕ್ಕೆ ಶಂಕುಸ್ಥಾಪನೆ ಶ್ರೀ ಗೋಕರ್ಣನಾಥ ಕ್ಷೇತ್ರದ ನವೀಕರಣದ ರೂವಾರಿ ಜನಾರ್ದನ ಪೂಜಾರಿಯವರು ಬಿಲ್ಲವರ ಭೀಷ್ಮನೆಂದೇ ಕರೆಯಲ್ಪಟ್ಟ ಅಂದು ಸಮಾಜದ ಹಿರಿಯರಾಗಿದ್ದ ಸೊರಕೆ ಚಂದ್ರಶೇಖರವರ ಅಧ್ಯಕ್ಷತೆಯಲ್ಲಿ, ಶಂಕುಸ್ಥಾಪನೆಯನ್ನು ಬಹಳ ಒತ್ತಾಸೆಯಿಂದ ಸೊರಕೆ ಚಂದ್ರಶೇಖರ ಅವರಿಂದಲೇ ನೆರವೇರಿಸಿದ್ದು, ನವೀಕರಣದ ಯಶ್ವಸಿಗೆ ಪೂರಕವಾಯಿತೆಂಬುದು ಅತಿಶಯೋಕ್ತಿಯಲ್ಲ.

        ಇಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಸನ್ನಿಧಾನವು ದೇವಲೋಕ ಧರೆಗಿಳಿದಂತೆ ಸೌಂದರ್ಯವನ್ನು ತುಂಬಿಕೊಂಡು, ಭಕ್ತರ ಹೃದಯದಲ್ಲಿ ಭಕ್ತಿಯ ಅಲೆಯನ್ನು ಸೃಷ್ಟಿಸಿ, ಲಕ್ಷಾಂತರ ಭಕ್ತರ ಮಾನಸಿಕ ತುಮುಲವನ್ನು ದೂರಮಾಡಿ ಕೋಟ್ಯಂತರ ಮಂದಿಯನ್ನು ಆಕರ್ಷಿಸುತ್ತಿದೆಯೆಂದರೆ, ಅದರ ಹಿಂದಿರುವ ಅಗಾಧ ಸಂಕಲ್ಪ ಶಕ್ತಿ, ಚೇತನ ಶಕ್ತಿ ಜನಾರ್ದನ ಪೂಜಾರಿಯೆಂದರೆ ಅದು ಅತಿಶಯೋಕ್ತಿಯಲ್ಲ. ಸುಮಾರು 29 ವರ್ಷಗಳ ಹಿಂದೆ ಶ್ರೀ ಕ್ಷೇತ್ರದ ನವೀಕರಣಕ್ಕೆ ಬೇಕಾದ ಸಂಪನ್ಮೂಲವನ್ನು ಕ್ರೋಢೀಕರಿಸುವುದು ಅಷ್ಟು ಸುಲಭದ ಕೆಲಸವಾಗಿರಲಿಲ್ಲ. ಆದರೆ ಕೇವಲ ಅಲ್ಪ ಅವಧಿಯಲ್ಲೇ ನವೀಕರಣದ ಕೆಲಸಕಾರ್ಯ ಮುಗಿಯುವಂತೆ ನೋಡಿಕೊಂಡು, ಪವಾಡಸದೃಶವಾಗಿ ಶ್ರೀ ಕ್ಷೇತ್ರ ಆವಿರ್ಭವಿಸುವಂತೆ ಮಾಡಿದ ಜನಾರ್ದನ ಪೂಜಾರಿಯವರ ಅವಿರತ ಪರಿಶ್ರಮ, ಸಮಗ್ರ ಚಿಂತನೆ, ಅದಕ್ಕೆ ಬೇಕಾದ ಯೋಜನೆಯನ್ನು ರೂಪಿಸಿದ ಪರಿ ಭಕ್ತರನ್ನು ವಿಸ್ಮಯಗೊಳಿಸಿದೆ.

ಶ್ರೀ ಗೋಕರ್ಣನಾಥ ಕ್ಷೇತ್ರದ ಸಮಗ್ರ ಅಭಿವೃದ್ಧಿ ಶ್ರೀ ಕ್ಷೇತ್ರದ ನವೀಕರಣ ಮುಗಿಯುತ್ತಿದ್ದಂತೆ ಪೂಜಾರಿಯವರು ವಿಶ್ರಾಂತಿ ಪಡೆದುಕೊಳ್ಳಲಿಲ್ಲ, ಬದಲಾಗಿ ಶ್ರೀ ಕ್ಷೇತ್ರದ ಉಳಿದ ಅಭಿವೃದ್ಧಿ ಕಾರ್ಯಗಳಲ್ಲಿ ತಮ್ಮನ್ನು ಸಂಪೂರ್ಣ ತೊಡಗಿಸಿಕೊಂಡರು. ಅತ್ಯಂತ ಭವ್ಯವಾದ ವಾಸ್ತುಶಿಲ್ಪ ಆಕರ್ಷಣೆಯ ಹವಾನಿಯಂತ್ರಿತ ವಿಶಾಲ ಸಭಾಂಗಣ ಸೇರಿದಂತೆ ನಾಲ್ಕು ಸಭಾಂಗಣಗಳ ನಿರ್ಮಾಣ, ಶ್ರೀ ಕ್ಷೇತ್ರದ ಪುಷ್ಕರಿಣಿಯಲ್ಲಿ ವಿಶ್ವದಾಖಲೆಯ ಎತ್ತರಕ್ಕೆ ಧುಮ್ಮಿಕ್ಕುವ “ಗಂಗಾವತರಣ”ದ ಅದ್ಭುತ ದೃಶ್ಯದ ಪರಿಕಲ್ಪನೆ, ಅತ್ಯಾಕರ್ಷಕ ‘ಪುಣ್ಯಕೋಟಿ’ ವನ, ಗೌರಿ ಮಂಟಪ ಇವೇ ಮುಂತಾದ ಅಪೂರ್ವ ನಿರ್ಮಾಣಗಳ ಮೂಲಕ ಶ್ರೀ ಕ್ಷೇತ್ರಕ್ಕೆ ಆದಾಯದ ಮೂಲ ದೊರಕಿಸಿದರು. ಪ್ರತ್ಯೇಕವಾಗಿ ನಿರ್ಮಿಸಲ್ಪಟ್ಟ ಹನುಮಾನ್ ಮಂದಿರ, ಶಿರ್ಡಿ ಸಾಯಿಬಾಬಾ ಮಂದಿರ ಇಂದು ಭಕ್ತರ ಆಕರ್ಷಣೆಗೆ ಹೊಸದಾಗಿ ಸೇರ್ಪಡೆಗೊಂಡು ಭಕ್ತಿಯನ್ನು ಇಮ್ಮಡಿಗೊಳಿಸಿದೆ.

ಧಾರ್ಮಿಕ ಚರಿತ್ರೆಯಲ್ಲಿ ಕ್ರಾಂತಿಕಾರಿ ಪರಿವರ್ತನೆಗೆ ಮುನ್ನುಡಿ  ನಮಗೆ ಜನ್ಮ ನೀಡಿದ ಮಾತೆಯರು ಒಂದು ವೇಳೆ ಆಕೆಯ ಪತಿ ತೀರಿಹೋದರೆ ಖಂಡಿತಾ ಆ ಮಾತೆ ಅಮಂಗಳೆಯಾಗುವುದಿಲ್ಲ. ವಿಧವೆಯಾದರೂ ಕೂಡ ದೇವರಿಗೆ ಪೂಜೆ ಮಾಡಬಹುದು. ಎಲ್ಲ ಮಂಗಳಕಾರ್ಯಗಳಲ್ಲಿ ಭಾಗವಹಿಸಬಹುದೆಂದು ಶ್ರೀ ಗೋಕರ್ಣನಾಥನ ಸನ್ನಿಧಾನದಲ್ಲಿ ತೋರಿಸಿ, ಅವರಿಗೂ ಆತ್ಮ ಗೌರವದ ಬದುಕು ದೊರಕಿಸಿ ಅವರ ಬಾಳಲ್ಲಿ ಆಶಾಕಿರಣ ಮೂಡಿಸಿ ಚಾರಿತ್ರಿಕ ಬದಲಾವಣೆ ತಂದವರು ಜನಾರ್ದನ ಪೂಜಾರಿಯವರು.

    ಶ್ರೀ ಗೋಕರ್ಣನಾಥ ಕ್ಷೇತ್ರದ ದಿವ್ಯ ಸನ್ನಿಧಿಯಲ್ಲಿ ದಲಿತ ಮಾತೆಯೊಬ್ಬರ ಪಾದಪೂಜೆ ನಡೆಸಿದ ಜನಾರ್ದನ ಪೂಜಾರಿಯವರು, ಶ್ರೀ ಕ್ಷೇತ್ರದಲ್ಲಿ ಅವರಿಂದಲೇ ದೇವರಿಗೆ ಆರತಿ ಬೆಳಗಿಸುವ ಅವಕಾಶ ನೀಡಿ ಜಾತಿ-ಭೇದ, ಸ್ಪರ್ಶ-ಅಸ್ಪರ್ಶ, ಲಿಂಗತಾರತಮ್ಯದ ವಿರುದ್ಧ ಸಮಾನತೆಯ ಜ್ಯೋತಿ ಬೆಳಗಿಸುವ ಮೂಲಕ ಸಾಮಾಜಿಕ ಧಾರ್ಮಿಕ ಪರಿವರ್ತನೆಗೆ ನಾಂದಿ ಹಾಡಿದರು.

ಮಹಿಳಾ ಅರ್ಚಕಿಯರ ನೇಮಕದ ಮೂಲಕ ಧಾರ್ಮಿಕ ಚರಿತ್ರೆಯಲ್ಲಿ ಒಂದು ಅಭೂತಪೂರ್ವ ಘಟನೆಗೆ ಶ್ರೀ ಕ್ಷೇತ್ರ ಸಾಕ್ಷಿಯಾಯಿತು. ಇಬ್ಬರು ವಿಧವೆ ಮಹಿಳೆಯರು ಹಾಗೂ ಇಬ್ಬರು ಪರಿಶಿಷ್ಟ ವರ್ಗದ ಮಹಿಳೆಯರಿಗೆ ಪೂಜಾ ವಿಧಿವಿಧಾನಗಳನ್ನು ಕಲಿಸಿ ಅವರನ್ನು ಮಹಿಳಾ ಅರ್ಚಕಿಯರನ್ನಾಗಿ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನೇಮಿಸಿ, ಅವರಿಂದಲೇ ದೇವರಿಗೆ ಪೂಜೆ ಮಾಡಿಸಿದ ಜನಾರ್ದನ ಪೂಜಾರಿಯವರು ಧಾರ್ಮಿಕ ಚರಿತ್ರೆಯಲ್ಲಿ ಸಂಚಲನವನ್ನುಂಟು ಮಾಡಿದರು. ಈ ಘಟನೆ ಇತರ ಧಾರ್ಮಿಕ ಕ್ಷೇತ್ರಗಳಲ್ಲೂ ಬದಲಾವಣೆಯ ಕ್ರಾಂತಿಕಾರಿ ಪರಿವರ್ತನೆಗೆ ಮುನ್ನುಡಿಯಾಯಿತು.

ಶೋಷಿತರು, ಬಡವರು ದುರ್ಬಲರ ಪರವಾದ ಧ್ವನಿ

ದೀನದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರು, ಶೋಷಿತ ಸಮುದಾಯ, ಆರ್ಥಿಕವಾಗಿ ಕೆಳವರ್ಗದವರ ಬಗ್ಗೆ ಅವರಿಗೆ ವಿಶೇಷವಾದ ಕಾಳಜಿ. ಧ್ವನಿಯಿಲ್ಲದವರು, ದುರ್ಬಲರ ಪರ ಕಳಕಳಿ, ಅನ್ಯಾಯಕ್ಕೊಳಗಾದವರ, ನೋವುಂಡವರ ಪರ ನ್ಯಾಯಕ್ಕಾಗಿ ದಿಟ್ಟ ಧ್ವನಿ ಅವರದ್ದು. ಮಾನವೀಯ ಅಂತಃಕರಣ, ಸಹೃದಯತೆ, ಸಚ್ಚಾರಿತ್ರ್ಯ, ಸತ್ಯ ಪ್ರಾಮಾಣಿಕತೆ, ಪಾರದರ್ಶಕ ವ್ಯಕ್ತಿತ್ವ, ನಿಷ್ಠೆ, ನೇರ ನಡೆನುಡಿ… ಜನಾರ್ದನ ಪೂಜಾರಿಯವರ ಇಂತಹ ಅಪೂರ್ವ ವ್ಯಕ್ತಿತ್ವ ಅವರನ್ನು ಓರ್ವ ವಿಶೇಷ ಶಕ್ತಿಯಾಗಿ ಗುರುತಿಸುವಂತೆ ಮಾಡಿದೆ.

ಅಂದು ಕೇಂದ್ರ ಸಚಿವರಾಗಿದ್ದಾಗ ಮಹಿಳೆಯರು, ದುರ್ಬಲರು, ಶೋಷಿತರು, ಕಡು ಬಡವರು, ಸಣ್ಣ ವ್ಯಾಪಾರಿಗಳು, ಹಿಂದುಳಿದ ಸಮುದಾಯ, ಅಲ್ಪ ಸಂಖ್ಯಾತರು, ಅಂಗವಿಕಲರು, ಮುಂತಾದ ವರ್ಗಗಳನ್ನು ಬ್ಯಾಂಕುಗಳು ಹೀನಾಯವಾಗಿ ಕಂಡು, ಆರ್ಥಿಕ ಶಕ್ತಿ ನೀಡಲು ಹಿಂಜರಿಯುತ್ತಿದ್ದ ಕಾಲದಲ್ಲಿ ಬ್ಯಾಂಕುಗಳನ್ನೇ ಬಡವರ ಮನೆ ಬಾಗಿಲಿಗೆ ತರಿಸಿ ಸಾಲಮೇಳಗಳ ಮೂಲಕ ಬ್ಯಾಂಕ್‍ಗಳಿಂದ ಸಾಲ ದೊರಕಿಸಿ ಈ ವರ್ಗಕ್ಕೆ  ಆರ್ಥಿಕ ಚೇತನ ನೀಡಿ, ಅವರಿಗೂ ಸ್ವಾವಲಂಬನೆ, ಸ್ವಾಭಿಮಾನ ಗೌರವದಿಂದ ಬದುಕುವ ಹಕ್ಕನ್ನು ದೊರಕಿಸಿದ ಕ್ರಾಂತಿಕಾರಿ ಯೋಜನೆ ಜಾರಿಗೆ ತಂದ ಜನಾರ್ದನ ಪೂಜಾರಿಯವರು ದೇಶದ ಆರ್ಥಿಕ ಚೇತರಿಕೆಗೆ, ಸಾಮಾಜಿಕ ಅಸಮಾನತೆ, ಬಡತನ ನಿರ್ಮೂಲನಕ್ಕೆ ದಿಟ್ಟ ಹೆಜ್ಜೆ ಇಟ್ಟರು.

ಅವಿಭಜಿತ ದಕ್ಷಿಣ- ಕನ್ನಡ ಜಿಲ್ಲೆಯ ಸಮಗ್ರ ಅಭಿವೃದ್ಧಿ, ನವಮಂಗಳೂರು ಬಂದರು ವಿಸ್ತರಣೆ, ವಿಮಾನ ನಿಲ್ದಾಣ ಅಭಿವೃದ್ಧಿ, ತೈಲಾಗಾರ ಸೇರಿದಂತೆ ಇತರ ಉದ್ಯಮಗಳು ಬರುವಂತೆ ಮಾಡಿ ತುಳುನಾಡಿನ ಲಕ್ಷಾಂತರ ನಿರುದ್ಯೋಗಿಗಳಿಗೆ ಉದ್ಯೋಗದ ಅವಕಾಶ ದೊರಕಿಸಿ ಅವರ ಬಾಳಲ್ಲಿ ಬೆಳಕನ್ನು ಮೂಡಿಸಿದವರು ಜನಾರ್ದನ ಪೂಜಾರಿಯವರು. ಸಂಘ ಸಂಸ್ಥೆಗಳ ಏಳ್ಗೆಗಾಗಿ ಅನುದಾನ, ಮುಂಬೈ ಬಿಲ್ಲವರ ಭವನ, ನಿವೇಶನ, ಬೆಂಗಳೂರು ಬಿಲ್ಲವರ ಸಂಘದ  ನಿವೇಶನ  ಸೇರಿದಂತೆ  ಕರಾವಳಿಯ ನೂರಾರು  ಸಂಘ  ಸಂಸ್ಥೆಗಳಿಗೆ  ಆರ್ಥಿಕ ಸಹಕಾರ ದೊರಕಿಸಿ ಸಮಾಜದ ಏಳಿಗೆಗೆ ಕಾರಣರಾದ ಪೂಜಾರಿಯವರು ಎಂದೂ ತನ್ನ ವೈಯಕ್ತಿಕ ಬದುಕಿನ ಬಗ್ಗೆ ಯೋಚಿಸಿಲ್ಲ. ಉನ್ನತ ಶಿಕ್ಷಣದ ಅವಕಾಶ ವಂಚಿತರಾದ ಅಸಹಾಯಕರಿಗಾಗಿ ಶ್ರೀ ಗೋಕರ್ಣನಾಥೇಶ್ವರ ಶಿಕ್ಷಣ ಸಂಸ್ಥೆ ಸ್ಥಾಪಿಸುವಲ್ಲಿ ಮಾರ್ಗದರ್ಶನ ಸಹಕಾರ ನೀಡಿ, ಅದರ ಅಭಿವೃದ್ಧಿಯಲ್ಲಿ ನಿರಂತರ ತೊಡಗಿಸಿಕೊಂಡು, ಬಡವರ ಮಕ್ಕಳ ಶಿಕ್ಷಣಕ್ಕೆ ಬೆಳಕಾದವರು ಪೂಜಾರಿಯವರು. ಪರರ ಸೇವೆಯಲ್ಲೇ ದೇವರನ್ನು ಕಂಡವರು ಜನಾರ್ದನ ಪೂಜಾರಿಯವರು ಎಂದೂ ತನ್ನ ಬಗ್ಗೆ ಯೋಚಿಸಿದವರಲ್ಲ. ದೇಶದ, ರಾಜ್ಯದ ಹಾಗೂ ತುಳುನಾಡಿನ ಬಡ ಜನತೆಯ ಅಭ್ಯುದಯದ ಬಗ್ಗೆ ಸದಾ ಚಿಂತನೆ ಅವರದ್ದು. ಯಾವುದೇ ಪ್ರಚಾರ, ಸದ್ದು ಗದ್ದಲವಿಲ್ಲದೆ ಅಸಹಾಯಕರ ಸೇವೆಗಾಗಿ ತುಡಿಯುವ ಮನಸ್ಸು ಅವರದ್ದು. ಅವರಿಂದ ವೈಯಕ್ತಿಕ ಸಹಾಯ ಪಡೆದವರ ಸಂಖ್ಯೆ ಅಗಣಿತ.

ತನ್ನ ಜೀವನದುದ್ದಕ್ಕೂ ಪರರ ಸೇವೆಯಲ್ಲೇ ದೇವರನ್ನು ಕಾಣುತ್ತಿರುವ ಪೂಜಾರಿಯವರು, ತನಗೆ ಸಿಗುವ ನಿವೃತ್ತಿ ವೇತನದಲ್ಲೂ ಹೆಚ್ಚಿನ ಪಾಲನ್ನು ಅನಾಥಾಶ್ರಮ, ಸಂಘ ಸಂಸ್ಥೆಗಳಿಗೆ ದಾನ ನೀಡುವ ಮೂಲಕ ಇಂದಿನ ರಾಜಕೀಯ ಮುಖಂಡರಿಗೆ ಆದರ್ಶರಾಗಿದ್ದಾರೆ. ಇಂತಹ ನಿಷ್ಕಳಂಕ ವ್ಯಕ್ತಿತ್ವದ ರಾಜಕೀಯ ಶಕ್ತಿಯನ್ನು ಇಂದಿನ ರಾಜಕೀಯದಲ್ಲಿ ನಾವು ಕಾಣಲು ಅಸಾಧ್ಯ. ತಾನು ಏನೇ ಸಾಧನೆ ಮಾಡಿದರೂ ಎಲ್ಲವೂ ಶ್ರೀ ಗೋಕರ್ಣನಾಥನ, ಶ್ರೀ ನಾರಾಯಣ ಗುರುಗಳ ಅನುಗ್ರಹದಿಂದಲೇ ಸಾಧ್ಯವಾಯಿತೆಂಬ ವಿನಮ್ರತೆ ಪೂಜಾರಿಯವರದ್ದು.

Leave a Comment

Your email address will not be published. Required fields are marked *

You cannot copy content of this page

Scroll to Top