ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ಅನುಕರಣೀಯ ಹೆಜ್ಜೆ

ಕರೋನಾ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರಿಗೆ ಮಾನವೀಯ ನೆರವು

ಮಾನವತೆಯ ಹರಿಕಾರ, ಯುಗಪುರುಷ, ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುವರ್ಯರ ದಿವ್ಯ ಹಸ್ತದಿಂದಲೇ ಪ್ರತಿಷ್ಠಾಪನೆಗೊಂಡು, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಸಹಾಯ, ಸಹಕಾರ ಬೆಂಬಲದೊಂದಿಗೆ ನವೀಕರಣಗೊಂಡು ವಿಶ್ವವಿಖ್ಯಾತಿ ಗಳಿಸಿದ ಶ್ರೀ ಗೋಕರ್ಣನಾಥ ಕ್ಷೇತ್ರ ಕರೋನಾ ಸಂದರ್ಭ ಲಾಕ್‍ಡೌನ್‍ನಿಂದ ಸಂಕಷ್ಟದಲ್ಲಿದ್ದವರ ನೆರವಿಗೆ ಧಾವಿಸಿ ಧಾರ್ಮಿಕ ಕ್ಷೇತ್ರದಲ್ಲಿ ಒಂದು ಅಪೂರ್ವ ಸೇವೆಗೆ ಸಾಕ್ಷಿಯಾಗಿದೆ. ಕ್ಷೇತ್ರದ ಈ ಅನುಕರಣೀಯ ನಡೆ ಸರ್ವತ್ರ ಮೆಚ್ಚುಗೆಗೆ ಪಾತ್ರವಾಗಿದೆ.

ಜನಾರ್ದನ ಪೂಜಾರಿಯವರ ಮಾರ್ಗದರ್ಶನ ಬೆಂಬಲದೊಂದಿಗೆ, ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್‍ರವರ ಉಪಸ್ಥಿತಿಯಲ್ಲಿ , ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್‍ರವರ ವಿಶೇಷ ಮುತುವರ್ಜಿಯಿಂದ ಭಕ್ತರ ಸಹಕಾರದಲ್ಲಿ ಕರೋನಾ ಲಾಕ್‍ಡೌನ್ ಸಂದರ್ಭ ಊಟಕ್ಕೂ ತೊಂದರೆ ಅನುಭವಿಸಿದ ಜಿಲ್ಲೆಯ ಸಾವಿರಾರು ಕುಟುಂಬಗಳಿಗೆ ಸುಮಾರು 350 ಕಿಂಟ್ವಾಲ್ ಅಕ್ಕಿ ನೀಡಿದಲ್ಲದೆ, ಸುಮಾರು 1250 ಮಂದಿಗೆ 42 ದಿನಗಳ ಕಾಲ ಶ್ರೀ ಕ್ಷೇತ್ರದಿಂದಲೇ ಅನ್ನದಾನಕ್ಕೆ ವ್ಯವಸ್ಥೆ ಮಾಡಿ, ಅಸಹಾಯಕರ ನೋವಿಗೆ ಸ್ಪಂದಿಸುವ ಮೂಲಕ ಧಾರ್ಮಿಕ ಕ್ಷೇತ್ರದ ಇತಿಹಾಸದಲ್ಲೊಂದು ಮೈಲುಗಲ್ಲು ನಿರ್ಮಿಸಿ ಇತರರಿಗೆ ಮೇಲ್ಪಂಕ್ತಿಯಾಯಿತು. ಒಟ್ಟು 12.80 ಲಕ್ಷ ರೂಪಾಯಿಯನ್ನು ದಾನಿಗಳ ಮೂಲಕ ಸಂಗ್ರಹಿಸಿ ಅಶಕ್ತರ ಆಶಾಕಿರಣವಾಗಿದೆ.

ಒಂದು ಧಾರ್ಮಿಕ ಕ್ಷೇತ್ರದಿಂದ ಈ ರೀತಿಯಲ್ಲೂ ಅವಶ್ಯಕತೆಯಿದ್ದಾಗ ಅಸಹಾಯಕರ ಸೇವೆ ಸಾಧ್ಯ ಎಂಬುದನ್ನು ಶ್ರೀಕ್ಷೇತ್ರ ತೋರಿಸಿಕೊಟ್ಟಿದೆ. ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಸಂದೇಶಗಳನ್ನು ಪೂರ್ಣ ರೀತಿಯಲ್ಲಿ ಅನುಷ್ಠಾನಕ್ಕೆ ತಂದ ಶ್ರೀಕ್ಷೇತ್ರ ಜನಾರ್ದನ ಪೂಜಾರಿಯವರಿಂದ ಆನೇಕ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಗಳು ಈ ಕ್ಷೇತ್ರದಿಂದ ನಡೆಯುತ್ತಿರುವುದು ಸಮಾಜಕ್ಕೆ ಹೆಮ್ಮೆಯೆನಿಸಿದೆ.

ಶ್ರೀಕ್ಷೇತ್ರದಿಂದ ನಡೆಯುತ್ತಿರುವ ಬಡವರ ಮಕ್ಕಳ ಶಿಕ್ಷಣಕ್ಕೆ ನೆರವು, ಅನಾರೋಗ್ಯ ಪೀಡಿತ ಬಡವರ ಚಿಕಿತ್ಸೆಗೆ ವೈದ್ಯಕೀಯ ಸಹಾಯಧನ, ಅನ್ನದಾನ, ಸೇರಿದಂತೆ ಹತ್ತು ಹಲವು ಸಾಮಾಜಿಕ ಸೇವಾಕಾರ್ಯಗಳೊಂದಿಗೆ ಕರೋನಾದಂತ ಸಾಂಕ್ರಾಮಿಕ ರೋಗದಿಂದಾಗಿ ನಲುಗಿದ ಅಸಹಾಯಕ ಜನತೆಯ ಕಣ್ಣೀರು ಒರೆಸುವ ಮೂಲಕ ದೇವರ ಸೇವೆ ಸಾಧ್ಯ ಎಂದು ತೋರಿಸಿಕೊಟ್ಟ ಶ್ರೀ ಗೋಕರ್ಣನಾಥ ಕ್ಷೇತ್ರದ ಈ ಮಾನವೀಯ ಸಾಮಾಜಿಕ ಸೇವೆ ಸಮಾಜಕ್ಕೆ ಮೇಲ್ಪಂಕ್ತಿಯಾಗಿ ಹೆಮ್ಮೆ ಗೌರವ ತಂದಿದೆ.

ಬ್ರಹ್ಮಶ್ರೀ ನಾರಾಯಣ ಗುರುವರ್ಯರ ತತ್ವ ಸಂದೇಶಗಳಂತೆ ಶ್ರೀ ಗೋಕರ್ಣನಾಥ ಕ್ಷೇತ್ರದಿಂದ ನೊಂದವರ, ಶೋಷಿತರ, ಬಡವರ ಕಣ್ಣೀರು ಒರೆಸಿ ಅವರ ಬಾಳಿಗೆ ಬೆಳಕು ನೀಡುವ ಇಂತಹ ಮಾನವೀಯ ಸೇವೆ ನಡೆಯುವಲ್ಲಿ ಸರ್ವ ಬೆಂಬಲ, ಮಾರ್ಗದರ್ಶನ ನೀಡುತ್ತಿರುವ ಜನಾರ್ದನ ಪೂಜಾರಿಯವರ ಸಾಮಾಜಿಕ ಕಳಕಳಿ ಶ್ಲಾಘನೀಯ. ಜನಾರ್ದನ ಪೂಜಾರಿಯವರ ಆಶಯದಂತೆ ಈ ಅಭೂತ ಪೂರ್ವ ಸೇವಾ ಕೈಂಕರ್ಯ ನಡೆಯುವಲ್ಲಿ ಮುನ್ನಡೆದ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಎಚ್.ಎಸ್ ಸಾಯಿರಾಮ್, ಅದನ್ನು ಅನುಷ್ಠಾನಗೊಳಿಸುವಲ್ಲಿ ಅತ್ಯಂತ ಮುತುವರ್ಜಿಯಿಂದ ಶ್ರಮಿಸುತ್ತಿರುವ ಕೋಶಾಧಿಕಾರಿ ಪದ್ಮರಾಜ್, ಸಹಕಾರ ನೀಡುತ್ತಿರುವ ಆಡಳಿತ ಮಂಡಳಿ ಟ್ರಸ್ಟಿಗಳು, ಸದಸ್ಯರು, ಈ ಬೃಹತ್ ಅಭಿಯಾನಕ್ಕೆ ಕೈ ಜೋಡಿಸಿದ ಶ್ರೀ ಕ್ಷೇತ್ರದ ಹಾಗೂ ಶ್ರೀ ನಾರಾಯಣ ಗುರುವರ್ಯರ ಸಮಸ್ತ ಭಕ್ತರಿಗೆ ಶ್ರೀದೇವರ, ಶ್ರೀಗುರುಗಳ ಅನುಗ್ರಹದ ಜತೆಗೆ ಸಹಾಯ ಪಡೆದ ಅಸಹಾಯಕ ಹಾರೈಕೆಯೇ ಶಕ್ತಿಯಾಗಿದೆ.

Leave a Comment

ನಿಮ್ಮ ಮಿಂಚಂಚೆ ವಿಳಾಸ ಎಲ್ಲೂ ಪ್ರಕಟವಾಗುವುದಿಲ್ಲ. ಅತ್ಯಗತ್ಯ ವಿವರಗಳನ್ನು * ಎಂದು ಗುರುತಿಸಲಾಗಿದೆ

You cannot copy content of this page

Scroll to Top