ಕಳೆದ ವಾರವಷ್ಟೇ ಕುದ್ರೋಳಿ ಕ್ಷೇತ್ರದ ‘ಮಂಗಳೂರು ದಸರಾ’ ಮಹೋತ್ಸವ ಮಾದರಿ ಉತ್ಸವವಾಗಿಸಲು ಪ್ರಮುಖ ಕಾರಣಕರ್ತರಾದ ಶ್ರೀ ಗೋಕರ್ಣನಾಥ ಸೇವಾದಳ ಸದಸ್ಯರು, ಕ್ಷೇತ್ರದ ಭಕ್ತರು, ಯುವಕರ ತಂಡದಿಂದ ಕ್ಷೇತ್ರದ ಪುಷ್ಕರಣಿ ಶುಚಿತ್ವ ಕಾರ್ಯ ಭಾನುವಾರ ಅಚ್ಚುಕಟ್ಟಾಗಿ ನೆರವೇರಿತು.

ಬ್ರಹ್ಮಶ್ರೀ ನಾರಾಯಣಗುರುಗಳ ತತ್ವದಂತೆ ನಾವೆಲ್ಲರೂ ಒಂದೇ ಎನ್ನುವ ಭಾವನೆಯಿಂದ, ಒಂದೇ ತಾಯಿಯ ಮಕ್ಕಳಂತೆ, ಪರಸ್ಪರ ಸಹೋದರತೆ ಸಾರುವ ರೀತಿಯಲ್ಲಿ ಬೆಳಗ್ಗೆ 9 ಗಂಟೆಗೆ ಶುಚಿತ್ವ ಕಾರ್ಯದಲ್ಲಿ ತೊಡಗಿಕೊಂಡ ಸದಸ್ಯರು ಮಧ್ಯಾಹ್ನ 12.30ರೊಳಗೆ ಪೂರ್ಣ ಸ್ವಚ್ಛತೆ ಮಾಡಿದರು… ಸುಮಾರು ಎರಡು ಲೋಡುಗಳಷ್ಟು ಕೆಸರನ್ನು ಮೇಲಕೆತ್ತಲಾಯಿತು.

ದೇವಸ್ಥಾನದ ಕೋಶಾಧಿಕಾರಿ, ಬಿಲ್ಲವ ಯೂತ್ ಐಕಾನ್ ಪದ್ಮರಾಜ್ ಆರ್. ಸ್ವಯಂಸೇವೆಯಲ್ಲಿ ತೊಡಗುವ ಮೂಲಕ ಯುವಕರಿಗೆ ಸ್ಫೂರ್ತಿ ತುಂಬಿದರು… ಸುಮಾರು 150 ರಷ್ಟು ಮಂದಿ ಗೋಕರ್ಣನಾಥನ ಮಡಿಲಿನಲ್ಲಿ ಶ್ರೀದೇವರ ಸೇವೆಯನ್ನು ನಿಸ್ವಾರ್ಥ ಮನೋಭಾವದಲ್ಲಿ ತೊಡಗಿಸಿಕೊಂಡು ಕ್ಷೇತ್ರಾಡಳಿತ ಮತ್ತು ಅಭಿವೃದ್ಧಿ ಸಮಿತಿಯ ಶ್ಲಾಘನೆಗೆ ಪಾತ್ರರಾದರು.
ಪುಷ್ಕರಣಿಯಲ್ಲಿದ್ದ ದೊಡ್ಡ ಮೀನು, ಆಮೆಗಳನ್ನು ನೀರು ಖಾಲಿ ಮಾಡುವ ವೇಳೆ ಬೇರೆ ಕಡೆ ಸ್ಥಳಾಂತರಿಸಲಾಯಿತು. ಎಲ್ಲ ಶುಚಿಗೊಳಿಸಿದ ಬಳಿಕ ನೀರು ತುಂಬಿದ ಮೇಲೆ ಮತ್ತೆ ಮೀನುಗಳನ್ನು ಪುಷ್ಕರಣಿಗೆ ಬಿಡಲಾಯಿತು. ಶುಚಿತ್ವ ಕಾರ್ಯ ವೇಳೆ ದೇವಸ್ಥಾನಕ್ಕೆ ಆಗಮಿಸಿದ ದ.ಕ ಜಿಲ್ಲಾಧಿಕಾರಿ ಡಾ.ರಾಜೇಂದ್ರ ಕೆ.ವಿ ಯುವಕರ ಉತ್ಸಾಹ ನೋಡಿ ಶ್ಲಾಘನೆ ವ್ಯಕ್ತಪಡಿಸಿದರು.