ಮಂಗಳೂರು ದಸರಾ: 2020: ಲೇಖನ: ದಯಾನಂದ ಉಗ್ಗೆಲ್ ಬೆಟ್ಟು

ಶ್ರೀ ಗೋಕರ್ಣನಾಥ ಸ್ವರ್ಣ ರೂಪಿ ಸ್ವರ್ಗ: ದಯಾನಂದ ಉಗ್ಗೆಲ್ ಬೆಟ್ಟು

ಅನನ್ಯ ಸಾದೃಶ್ಯ, ಅಪೂರ್ವ ಸಾಹಚರ್ಯ, ಭಕ್ತಿಯ ಅನುರಣನ, ಸಾಂಸ್ಕೃತಿಕ ಅನುಸಂಧಾನ,ಇಂತಹ ಪರಮಧಾಮ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನವನಾವೀನ್ಯ ವೈಭವೋನ್ನತಿಗಳಿಗೆ ಸಾಕ್ಷಿಯಾಗುತ್ತಿದ್ದ ಮಂಗಳೂರು ದಸರಾ ಈ ಬಾರಿ ಪ್ರತಿಯೊಬ್ಬ ಭಕ್ತರ ಕ್ಷೇಮದ ಆದ್ಯವಾಗಿ ಸುವ್ಯವಸ್ಥಿತ ರೀತಿಯಲ್ಲಿ ಬೆರಗು ಮತ್ತು ಅಚ್ಚರಿಗಳಿಗೆ ಸಾಕ್ಷಿಯಾಗಿ ಸಂಭ್ರಮಗೊಳ್ಳುತ್ತಿದೆ.

ಸುತ್ತಲೂ ಕವಿದ ಕೋರೊನಾ ಕತ್ತಲಿಗೆ ಸೂಕ್ತ ಯೋಚನೆ,ಯೋಜನೆಗಳ ಸಾಧ್ಯತೆಗಳಿಂದ ಬೆಳಕನ್ನು ಪ್ರವಹಿಸಲು ಸಾಧ್ಯ ಎನ್ನುವುದನ್ನೆ ನಿರೂಪಿಸುತ್ತಿದೆ ನಮ್ಮ ದಸರಾ ನಮ್ಮ ಹೆಮ್ಮೆ ಎನ್ನುವ ಅಭಿಮಾನದ ಆಚರಣಾ ಅಭಿಯಾನವು.

ಈ ಸಾನಿಧ್ಯವೆ ಹಾಗೆ.ಸಾಮಾನ್ಯರು ಅಸಾಮಾನ್ಯವನ್ನು ಸೃಷ್ಟಿಗೊಳಿಸಿದ ಭವ್ಯ ಸನ್ನಿಧಿ.ಸುಧಾರಣೆಯ ಸೊಡರು ಪ್ರಾತಃಸ್ಮರಣೀಯ ಬ್ರಹ್ಮಶ್ರೀ ನಾರಾಯಣಗುರುಗಳ ಸತ್ಯಸಾಕ್ಷಾತ್ ಪುಣ್ಯ ಸ್ಪರ್ಶದಿಂದ ಪ್ರತಿಷ್ಠಾಪಿತಗೊಂಡಿರುವ ಪವಾಡ ಪಾವನ ನೆಲೆಯಿದು.

ವಿಶ್ವ ಭಾತೃತ್ವದ ಸಹಮನದಿಂದ ಸ್ವಾಭಿಮಾನಿ ಸಮಾಜದ ಸಂಘಟನಾತ್ಮಕ ಪ್ರತೀಕವಾಗಿ ಸಾಹುಕಾರ್ ಕೊರಗಪ್ಪನವರ ನೇತೃತ್ವದ ಆರಂಭಕ್ಕೆ, ಅಷ್ಟೇ ತಕ್ಕುದ್ದಾದ ಮಹತ್ವಾಕಾಂಕ್ಷೆಗಳನ್ನು ಕಲ್ಪಿಸಿ ಇಚ್ಛಾಶಕ್ತಿಯ ಹೃದಯವಂತಿಕೆಯೊಡನೆ ಸರ್ವರೀತ್ಯಾ ಕಾಯಕಲ್ಪದ ರೂವಾರಿ ಹೆಮ್ಮೆಯ ಧುರೀಣ ಗೌರವಾನ್ವಿತ ಜನಾರ್ದನ ಪೂಜಾರಿಯವರ ದಕ್ಷ ಸಾರಥ್ಯದ ಮಾರ್ಗದರ್ಶನವು ಇಂದಿನ ಒಳಿತುಗಳಿಗೂ ಪ್ರೇರಣೆಯಾಗುತ್ತಿರುವುದು ಅಕ್ಷರಶಃ ಸತ್ಯ.
ಬಂದವರು ಮತ್ತೆ ಮತ್ತೆ ಬರಬೇಕೆನಿಸುವ,ಬಾರದಿರುವವರು ಬರಬೇಕೆಂದು ಹಂಬಲಿಸುವ ಬಹುಮಂದಿಯಲ್ಲಿ ಬಹುರೀತ್ಯಾ ಬಹುಮಾನ್ಯಗೊಂಡಿರುವ ಸ್ವರ್ಣರೂಪಿ ಸ್ವರ್ಗ ಶ್ರೀ ಕ್ಷೇತ್ರ ಕುದ್ರೋಳಿ.

ಮಂಗಳೂರು ದಸರಾ ಈ ವರ್ಷ ಹೇಗೆ ಎಂಬ ಚಿಂತನೆಗೆ ಒಂದು ಆದರ್ಶವಾದ ಪ್ರಯತ್ನದಲ್ಲಿ ಆಡಳಿತ ಸಮಿತಿ ಗೆಲ್ಲುತ್ತಿದೆ.ಯಾಕೆ ಉತ್ಸವದ ಉಸಾಬರಿ ಎಂದು ಎಲ್ಲೆಡೆಯೂ ಸರಳ ಸಾಂಕೇತಿಕ ಧಾರ್ಮಿಕ ವಿಧಿವಿಧಾನಗಳಿಗೆ ಸೀಮಿತಗೊಂಡಿದ್ದರೂ ಕುದ್ರೋಳಿಯಲ್ಲಿ ಮಾತ್ರ ಶ್ರಮನಿಷ್ಠೆಯ ಪ್ರಯತ್ನಗಳು ಶ್ಲಾಘನೀಯವಾಗಿ ಫಲಿಸುತ್ತಿದೆ.

ಸಾರ್ವಜನಿಕ ಭಕ್ತಬಂಧುಗಳನ್ನು ದೇವಸ್ಥಾನ ಪ್ರವೇಶದಿಂದ ನಿರ್ಗಮನದವರೆಗೂ ಸೂಕ್ತ ಮಾರ್ಗಸೂಚಿಯೊಡನೆ ಪ್ರತಿಯೊಬ್ಬರನ್ನೂ ವಿಶೇಷ ಆಸ್ಥೆಯಿಂದ ನಿರ್ವಹಿಸಲಾಗುತ್ತಿದೆ.

ನವದುರ್ಗೆಯರೊಂದಿಗೆ ಸರ್ವಾಲಂಕೃತ ಶೋಭಿತೆ ಶಾರದಾ ಮಾತೆಯು ಪ್ರತಿಷ್ಠಾಪನೆಗೊಂಡಿರುವ ದರ್ಬಾರ್ ಹಾಲ್‌ನಲ್ಲಿ ವಿಶೇಷ ಕ್ರಮನಿಯಮದೊಂದಿಗೆ ಸಾವಧಾನಚಿತ್ತ ಪ್ರದಕ್ಷಿಣೆಗೆ ಅವಕಾಶ ಕಲ್ಪಿಸಲಾಗಿದೆ.

ಗಮನಾರ್ಹವಾದ ಸಂಗತಿಯೆಂದರೆ ಎಲ್ಲರೂ ಧನ್ಯಮನದಲ್ಲಿ ಮೆಚ್ಚುಗೆ ವ್ಯಕ್ತಪಡಿಸುತ್ತಿರುವ ಅನ್ನದಾನ ಸೇವೆ.ಇಂದಿನ ಪರಿಸ್ಥಿತಿಗೆ ಹೊಂದಿಕೊಂಡು ಹೊಸತನಕ್ಕೆ ಸಾಕ್ಷಿಯಾಗಿ ಹಾಳೆಯ ತಟ್ಟೆಯಲ್ಲಿ ಪ್ಯಾಕ್ ಮಾಡಿದ ಅನ್ನಪ್ರಸಾದವನ್ನು ದಿನಂಪ್ರತಿ ಸಹಸ್ರಾರು ಮಂದಿ ಸ್ವೀಕರಿಸುತ್ತಿದ್ದಾರೆ.ರುಚಿಶುಚಿಯಾದ ಈ ತಯಾರಿಯಲ್ಲಿ ಮುಖಕ್ಕೆ ಮಾಸ್ಕ್ ,ಫೇಸ್ ಶೀಲ್ಡ್, ಕೈಗ್ಲೌಸ್‌ಗಳ ಬಳಕೆಯೊಂದಿಗೆ ಎಲ್ಲಾ ಸ್ವಯಂ ಸೇವಕರು ನಿಯಮಾನುಸರಣೆಯನ್ನು ಮಾಡುತ್ತಿರುವುದು ಕ್ಷೇತ್ರದ ದಕ್ಷ ಕಾರ್ಯವೈಖರಿಯ ಕನ್ನಡಿಯಾಗಿದೆ.

ಕಲಾಮಾತೆಯ ಉತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮಗಳಿಗೂ ಅವಕಾಶ ನೀಡಲಾಗಿದೆ.ಪಾರ್ಕಿಂಗ್ ನಿರ್ವಹಣೆ,ಚಪ್ಪಲಿ ಬಿಡುವ ಸ್ಥಳ,ಕಡ್ಡಾಯ ಮಾಸ್ಕ್,ಪ್ರತಿಯೊಬ್ಬರಿಗೂ ಥರ್ಮಲ್ ಸ್ಕ್ಯಾನ್, ಮಕ್ಕಳು ಮತ್ತು ಹಿರಿಯರ ಹಿತದೃಷ್ಟಿ ,ವಿಶೇಷ ಪ್ರಾರ್ಥನೆಯೊಂದಿಗೆ ಸಮರ್ಪಕ ರೀತಿಯಲ್ಲಿ ಸೇವಾರ್ಥಿಗರಿಗೆ ಪ್ರಸಾದ ವಿತರಣೆ,ಹಾಗೂ ಭಕ್ತರ ತನುಮನಕ್ಕೆ ಪೂರಕವಾದ ಸರ್ವರೀತ್ಯಾ ಅನುಕೂಲಗಳು ಸಾಕಾರಗೊಳ್ಳುತ್ತಿದೆ.

ಬ್ರಹ್ಮಶ್ರೀ ನಾರಾಯಣ ಗುರುಗಳ ದಿವ್ಯ ಆಶಯದಂತೆ ದೇವಸ್ಥಾನಗಳು ಸ್ವಚ್ಚ ಮನಸ್ಸು, ಸ್ವಚ್ಚ ಪರಿಸರದ ವಾತಾವರಣವನ್ನು ಹೊಂದಿ ಇಷ್ಟಾರ್ಥಗಳ ಸಿದ್ದಿ ಪ್ರಾರ್ಥನೆ,ಧ್ಯಾನಕ್ಕೆ ಯೋಗ್ಯವಾಗಿರಬೇಕೆನ್ನುವುದಕ್ಕೆ ಸಮರ್ಥ ಅರ್ಥವನ್ನು ಪ್ರಸ್ತುತ ಆಡಳಿತ ಸಮಿತಿಯು ನೀಡುತ್ತಿದೆ.ಎಚ್ ಎಸ್ ಸಾಯಿರಾಂ ಅಧ್ಯಕ್ಷತೆಯಲ್ಲಿ , ಕೋಶಾಧಿಕಾರಿ ಶುದ್ಧ ಮನಸ್ಸಿನಲ್ಲಿ ಎಲ್ಲರೂ ಜೊತೆಗೂಡಿ ಸಾಗೋಣವೆನ್ನುವ ಕ್ರಿಯಾಶೀಲ ಸಂಘಟಕ ಪದ್ಮರಾಜ್ ಆರ್ ರವರ ಸತ್‌ಚಿಂತನೆಗೆ ,ಪದಾಧಿಕಾರಿ ಪ್ರಧಾನರು ಬದ್ದ ನಿಲುವಿನೊಡನೆ ನಿರತರಾಗಿದ್ದಾರೆ.ಪ್ರತಿಫಲಾಪೇಕ್ಷೆಯಿಲ್ಲದ ನಿರ್ಮಲ ಸ್ವಾಭಿಮಾನಿ ಸಮಾಜ ಮುಖಂಡರು ಅನೇಕ ಸಂಘಟನಾ ಧುರೀಣರು,ಮಹಿಳಾ ಮುನ್ನೇತ್ರೆಯರು,ಸಾಂಸ್ಕೃತಿಕ ಸೃಜನರು,ದಿನಂಪ್ರತಿ ನೂರಿನ್ನೂರು ಸ್ವಯಂ ಸ್ಪೂರ್ತಿಯ ಸೇವಕರ ಅಹರ್ನಿಶಿ ಸಹಭಾಗಿತ್ವದಿಂದ ಮಂಗಳೂರು ದಸರಾ ಆದರ್ಶದ ಹಾದಿಯಲ್ಲಿ ಹೊನ್ನಾಗಿ ಹೊಳೆಯುತ್ತಿದೆ.

ನಮ್ಮ ದಸರಾ ನಮ್ಮ ಹೆಮ್ಮೆ

ಸುರಕ್ಷತೆಯ ಮತ್ತು ಸುಭೀಕ್ಷೆಯ ಹಬ್ಬವೇ ಆಗಿ ಸಂಭ್ರಮಿಸುತ್ತಿದೆ ಶ್ರೀ ಗೋಕರ್ಣನಾಥ ಭೂರಮೆ.
ನವದಿನಗಳಿಗೆ ನವದೀವಿಗೆಯ ಬೆಳಕು ಕುದ್ರೋಳಿಯ ಶ್ರೀ ಗೋಕರ್ಣನಾಥ ಕ್ಷೇತ್ರದಿಂದಲೇ ಹೊರಹೊಮ್ಮಿದ ದಿವ್ಯಾನುಭೂತಿಗೆ ಧನ್ಯತೆಯ ಸದ್ಭಾವದಿಂದ ಒಡಲುಕ್ಕಿ ಬಂದಿದೆ.

✍? ದಯಾನಂದ ಕರ್ಕೇರ,ಉಗ್ಗೆಲ್‌ಬೆಟ್ಟು

Leave a Comment

Your email address will not be published. Required fields are marked *

You cannot copy content of this page

Scroll to Top