ಗಣಪತಿ, ನವದುರ್ಗೆಯರು, ಆದಿಶಕ್ತಿ, ಶಾರದೆ ಮೂರ್ತಿಗಳ ವಿಸರ್ಜನೆ

ಶ್ರದ್ಧಾ ಭಕ್ತಿಯಿಂದ ಶಿಸ್ತುಬದ್ಧ ಮಂಗಳೂರು ದಸರಾ ಸಂಪನ್ನ

ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆದ ಮಂಗಳೂರು ದಸರಾ ಮಹೋತ್ಸವದಲ್ಲಿ ಪೂಜಿಸಲ್ಪಟ್ಟ ದೇವರ ವಿಸರ್ಜನಾ ಪೂಜೆ ಶ್ರದ್ಧಾ ಭಕ್ತಿಯಿಂದ ಸೋಮವಾರ ನಡೆಯಿತು.


ಸಂಜೆ ವಿಸರ್ಜನಾ ಪೂಜೆ ನೆರವೇರಿದ ಬಳಿಕ ಕ್ಷೇತ್ರದ ಪುಷ್ಕರಿಣಿಯಲ್ಲಿ ಗಣಪತಿ, ನವದುರ್ಗೆಯರು, ಆದಿಶಕ್ತಿ, ಶಾರದೆ ಮೂರ್ತಿಗಳ ವಿಸರ್ಜನೆಯೊಂದಿಗೆ ಮಂಗಳೂರು ದಸರಾ ಸಮಾಪನಗೊಂಡಿತು.


ಅ.26ರಂದು ರಾತ್ರಿ 6.30ಕ್ಕೆ ವಿಸರ್ಜನಾ ಪೂಜೆ ನಡೆದರೆ, 8ಗಂಟೆಗೆ ದೇವಸ್ಥಾನದ ಪುಷ್ಕರಿಣಿಯಲ್ಲಿ ಮಹಾಗಣಪತಿ ಮೂರ್ತಿಯ ವಿಸರ್ಜನೆ ಆರಂಭವಾಗಿ ರಾತ್ರಿ 1.45ಕ್ಕೆ ಶಾರದಾ ದೇವಿಯ ವಿಸರ್ಜನೆಯಾಯಿತು. ಗಣಪತಿ ಸಹಿತ ಉಳಿದ ಮೂರ್ತಿಗಳನ್ನು ದೇವಸ್ಥಾನಕ್ಕೆ ಪ್ರದಕ್ಷಿಣೆ ಮಾಡಿದರೆ, ಶಾರದೆಯ ಮೂರ್ತಿಯನ್ನು ದೇಳದ ಮುಖ್ಯ ದ್ವಾರದವರೆಗೆ ತಂದು ಹಿಂತಿರುಗಿ ದೇವಳಕ್ಕೆ ಪ್ರದಕ್ಷಿಣೆ ಹಾಕಿ ವಿಸರ್ಜನೆ ನಡೆಯಿತು. ತಡರಾತ್ರಿಯವರೆಗೂ ಭಕ್ತಾದಿಗಳು ದೇವರ ವಿಸರ್ಜನಾ ವೈಭವ ವೀಕ್ಷಿಸಿದರು.

ಹುಲಿ ಕುಣಿತ: ದೇವಸ್ಥಾನದ ಬಳಿ ಹುಲಿವೇಷದ 10 ತಂಡಗಳಿಗೆ 10 ನಿಮಿಷದಂತೆ ಕುಣಿಯಲು ಅವಕಾಶ ಮಾಡಿಕೊಡಲಾಗಿತ್ತು.

ನಗರ ಪ್ರದಕ್ಷಿಣೆ: ವರ್ಷಂಪ್ರತಿ ರಾತ್ರಿಯಿಡೀ ಅಸಂಖ್ಯಾತ ಟ್ಯಾಬ್ಲೊಗಳೊಂದಿಗೆ ನವದುರ್ಗೆಯರು, ಗಣಪತಿ, ಶಾರದೆ, ನಾರಾಯಣ ಗುರುಗಳ ಮೂರ್ತಿ ಸಹಿತ ವೈಭವದ ಶೋಭಾಯಾತ್ರೆ ನಡೆಯುತ್ತಿತ್ತು. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಶೋಭಾಯಾತ್ರೆ ಬದಲಿಗೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲಾಯಿತು.

ಈ ಟ್ಯಾಬ್ಲೋ ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ಸರ್ಕಲ್, ಕೆಎಸ್ ರಾವ್ ರಸ್ತೆ, ಪಿಎಂ ರಾವ್ ರೋಡ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗಕ್ಕೆ ಬಂದು ವಿ.ಟಿ.ರಸ್ತೆ ಮೂಲಕ ನವಭಾರತ್ ಸರ್ಕಲ್‌ಗೆ ಮರಳಿ ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿತು.

ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ, ರವಿಶಂಕರ್ ಮಿಜಾರು, ಅಭಿವೃದ್ಧಿ ಸಮಿತಿಯ ವೇದಕುಮಾರ್, ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ.ಸುವರ್ಣ, ರಮಾನಾಥ ಕಾರಂದೂರು ಉಪಸ್ಥಿತರಿದ್ದರು.
ಸೀಯಾಳಾಭಿಷೇಕ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಿತು. ಸರಸ್ವತೀ ದುರ್ಗಾಹೋಮ, ಶತ ಸೀಯಾಳಾಭಿಷೇಕ, ಶಿವಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನಡೆಯಿತು.

ಇಂದು ಗುರುಪೂಜೆ: ಅ.27ರಂದು ರಾತ್ರಿ 7ರಿಂದ 8 ಗಂಟೆ ತನಕ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಗುರುಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.

Leave a Comment

Your email address will not be published. Required fields are marked *

You cannot copy content of this page

Scroll to Top