ಧಾರ್ಮಿಕ ಕ್ಷೇತ್ರದಲ್ಲಿ, ಸಾಮಾಜಿಕ ಕ್ಷೇತ್ರದಲ್ಲಿ ಅದ್ವಿತೀಯವಾದ ಪರಿವರ್ತನೆಯ ಗಾಳಿ ಬೀಸುತ್ತಿದೆಯೆಂದಾದರೆ ಅದಕ್ಕೆ ಕಾರಣ ಜಗದ್ಗುರು ಬ್ರಹ್ಮಶ್ರೀ ನಾರಾಯಣ ಗುರುಗಳು ಹಾಗೂ ಆ ಮಹಾ ಪುರುಷರಿಂದಲೇ ಪ್ರತಿಷ್ಠಾಪಿಸಲ್ಪಟ್ಟ ದೇವಾಲಯಗಳು. ಧಾರ್ಮಿಕ ಶೋಷಣೆ, ಸಾಮಾಜಿಕ ಅಸಮಾನತೆ, ಅಸ್ಪೃಶ್ಯತೆಯ ಕರಾಳ ಬದುಕು, ಗುಲಾಮಗಿರಿತನ ಇವುಗಳನ್ನೆಲ್ಲಾ ಮೆಟ್ಟಿ ನಿಂತು. ಭಗವಂತನ ಸೃಷ್ಠಿಯಲ್ಲಿ ಮಾನವರೆಲ್ಲರೂ ಸಮಾನರು ಎಂದು ಸಾರಿ, ಈ ವರ್ಗಕ್ಕೆ ದೇವರ ದರ್ಶನ ಮಾಡಿಸಿದ ಮಹಾನ್ ಸಂತ ಬ್ರಹ್ಮಶ್ರೀ ನಾರಾಯಣ ಗುರುವರ್ಯರು. ಅಂದು ಶ್ರೀ ನಾರಾಯಣ ಗುರುಗಳು ಬಂದು ದೇವಾಲಯ ಸ್ಥಾಪನೆಯಂತಹ ಧಾರ್ಮಿಕ ಕ್ರಾಂತಿಕಾರಿ ಕಾರ್ಯ ಮಾಡದಿರುತ್ತಿದ್ದರೆ, ಈ ವರ್ಗಗಳಿಗೆ ಈ ತನಕವೂ ದೇವರ ದರ್ಶನದ ಭಾಗ್ಯ ಸಿಗುವುದು ದುರ್ಲಭವಾಗುತ್ತಿತ್ತು. ಅಸಮಾನತೆ ಶೋಷಣೆ ಹೆಚ್ಚಾಗಿ ಬಹುಸಂಖ್ಯಾತರಾದ ಹಿಂದುಳಿದ ವರ್ಗದವರು ಮತಾಂತರವಾಗುವ ಅಪಾಯವಿತ್ತು. ಶ್ರೀ ನಾರಾಯಣ ಗುರುಗಳ ಕ್ರಾಂತಿಕಾರಕ ಧಾರ್ಮಿಕ ಸುಧಾರಣೆಗಳ ಪ್ರೇರಣೆಯಿಂದಲೇ ಮುಂದೆ ಭಾರತ ಸರ್ಕಾರ ಅಸ್ಪೃಶ್ಯತೆಯ ವಿರುದ್ಧ ಸಮರ ಸಾರಿ, ಸಂವಿಧಾನದಲ್ಲೇ ಅಸ್ಪೃಶ್ಯತೆಯ ಆಚರಣೆ ಕಾನೂನು ಬಾಹಿರ ಎಂದು ಘೋಷಿಸಿತು. ನಮಗಿಂದು ಸರ್ವಸಮಾನತೆಯ, ಗೌರವ, ಸ್ವಾಭಿಮಾನದ ಬದುಕು ಸಾಧ್ಯವಾದದ್ದು ಶ್ರೀ ನಾರಾಯಣ ಗುರುಗಳಿಂದಲೇ ಎಂಬುದು ಸರ್ವಮಾನ್ಯ.
ಬಿಲ್ಲವ ಸಮಾಜದ ಹಿರಿಯರಿಂದ ಶ್ರೀ ನಾರಾಯಣ ಗುರುಗಳ ಭೇಟಿ
ಅಸ್ಪೃಶ್ಯತೆ ತುತ್ತ ತುದಿಯಲ್ಲಿದ್ದ ಆ ದಿನಗಳಲ್ಲಿ ಅವಿಭಜಿತ ದ.ಕ. ಜಿಲ್ಲೆಯಲ್ಲಿ ಬಹು ಸಂಖ್ಯಾತರೆನಿಸಿಕೊಂಡ ಬಿಲ್ಲವರು ಮೇಲ್ವರ್ಗವೆನಿಸಿಕೊಂಡವರಿಂದ ನೋವು ಅವಮಾನಗಳನ್ನು ಅನುಭವಿಸಿ ರೋಸಿ ಹೋಗಿದ್ದರು. ಆ ಸಮುದಾಯದವರಿಂದ ಮಾರುದ್ದ ದೂರ ನಿಲ್ಲಬೇಕಾದ ಹೀನಾಯ ಸ್ಥಿತಿ, ದೇವಾಲಯ, ವಿದ್ಯಾ ಮಂದಿರಗಳಲ್ಲಿ ಪ್ರವೇಶವಿಲ್ಲದೆ ಅನುಭವಿಸುತ್ತಿದ್ದ ನರಕಯಾತನೆ, ನೋವಿನಿಂದ ಜರ್ಜರಿತರಾದ ಸಮಾಜದ ಹಿರಿಯರು ಶ್ರೀಮಾನ್ ಸಾಹುಕಾರ್ ಕೊರಗಪ್ಪನವರ ನೇತೃತ್ವದಲ್ಲಿ, ಆದಾಗಲೇ ಕೇರಳದಲ್ಲಿ ಕ್ರಾಂತಿಕಾರಿ ಸಾಮಾಜಿಕ ಸುಧಾರಣೆಯ ಜ್ಯೋತಿ ಬೆಳಗಿಸಿದ ಶ್ರೀ ನಾರಾಯಣ ಗುರುಗಳನ್ನು ಕೇರಳದಲ್ಲಿ ಭೇಟಿ ಮಾಡಿದರು. ಧಾರ್ಮಿಕವಾಗಿ, ಸಾಮಾಜಿಕವಾಗಿ ಬಿಲ್ಲವರು ಅನುಭವಿಸುತ್ತಿರುವ ಸಂಕಟ, ನೋವು ಅಪಮಾನಗಳನ್ನು ಗುರುಗಳಿಗೆ ಮನವರಿಕೆ ಮಾಡಿ ತಮ್ಮ ಸಮಾಜವನ್ನು ಉದ್ಧರಿಸಬೇಕೆಂದು ನಿವೇದನೆ ಮಾಡಿಕೊಂಡರು. ಮಂಗಳೂರಿಗೆ ಬಂದು ದೇವಾಲಯ ಪ್ರತಿಷ್ಠಾಪಿಸುವುದಾಗಿ ಶ್ರೀ ನಾರಾಯಣ ಗುರುಗಳು ನೀಡಿದ ಭರವಸೆಯೊಂದಿಗೆ ಅವರು ಹಿಂತಿರುಗಿದರು. ಬಿಲ್ಲವ ಸಮಾಜದ ಹಿರಿಯರಿಗೆ ನೀಡಿದ ಭರವಸೆಯಂತೆ ಶ್ರೀ ನಾರಾಯಣ ಗುರುಗಳು 1908ರಲ್ಲಿ ಪ್ರಪ್ರಥಮ ಬಾರಿಗೆ ಈ ತುಳುನಾಡಿನ ಪುಣ್ಯ ಭೂಮಿಗೆ ಪಾದಾರ್ಪಣೆ ಮಾಡಿದರು.

ಶಿವನ ಸಾನಿಧ್ಯವಿದ್ದ ಆ ಸ್ಥಳ ಮಂಗಳೂರಿನಾದ್ಯಂತ ಕ್ಷೇತ್ರ ಪ್ರತಿಷ್ಠಾಪನೆಗೆ ಸೂಕ್ತ ಸ್ಥಳಕ್ಕಾಗಿ ಹುಡುಕಾಡಿ ಪಾಳುಬಿದ್ದ ಪ್ರದೇಶವೊಂದರಲ್ಲಿ ಬಂದು ನಿಂತರು. ತಮ್ಮ ದಿವ್ಯ ದೃಷ್ಟಿಯಿಂದ ಅದೇ ಸ್ಥಳದಲ್ಲಿ ಶಿವನ ಸಾನಿಧ್ಯ ಇರುವುದು ಗುರುಗಳಿಗೆ ಗೋಚರವಾಯಿತು. ಕುದ್ರೋಳಿ ಎಂಬಲ್ಲಿನ ಈ ಸ್ಥಳವೇ ದೇವಾಲಯ ಸ್ಥಾಪನೆಗೆ ಯೋಗ್ಯ ಸ್ಥಳವೆಂದು ಬಿಲ್ಲವ ಮುಖಂಡರಿಗೆ ಮನವರಿಕೆ ಮಾಡಿ ಕೆಲಸ ಪ್ರಾರಂಭಿಸಲು ಹೇಳಿ, ತಾತ್ಕಾಲಿಕವಾದ ಗುಡಿಯೊಂದನ್ನು ನಿರ್ಮಿಸಿ, ಅಲ್ಲಿ ದೇವರ ಪಟವೊಂದನ್ನಿಟ್ಟು ಪ್ರಾರ್ಥನೆ ಮಾಡಲು ಹೇಳಿದರು. ಸಮಾಜ ಸಂಘಟನೆ, ಜಾಗೃತಿಗಾಗಿ “ಶಿವಭಕ್ತಿಯೋಗ ಸಂಘ”ವನ್ನು ಸ್ಥಾಪಿಸಿ “ವಿದ್ಯೆಯಿಂದ ಸ್ವತಂತ್ರರಾಗಿರಿ, ಸಂಘಟನೆಯಿಂದ ಶಕ್ತಿ ಪಡೆಯಿರಿ” ಎಂದು ಉಪದೇಶಿಸಿದರು. ಇದುವೆ ಮುಂದೆ ಬಿಲ್ಲವ ಸಮಾಜದ ಪುನರುತ್ಥಾನಕ್ಕೆ ಮುನ್ನುಡಿಯಾಗಿ ಬಿಲ್ಲವರ ಬದುಕಿನಲ್ಲಿ ನವಮನ್ವಂತರದ ಸೂರ್ಯೋದಯಕ್ಕೆ ನಾಂದಿಯಾಯಿತು.
ಗುರುಗಳ ಕಾರುಣ್ಯದಿಂದ ಉಪ್ಪು ನೀರು ಇರುವ ಪ್ರದೇಶದಲ್ಲಿ ಶುದ್ಧ ನೀರು ದೊರೆಯಿತು
ಪೂಜ್ಯ ಗುರುವರ್ಯರು ಎರಡನೆಯ ಸಲ ಇಲ್ಲಿಗೆ ಭೇಟಿ ನೀಡುವ ಸಂದರ್ಭದಲ್ಲಿ ಕ್ಷೇತ್ರ ನಿರ್ಮಾಣದ ಕಾರ್ಯ ಭರದಿಂದ ಸಾಗುತ್ತಿತ್ತು. ಅದೇ ಸಂದರ್ಭದಲ್ಲಿ ಈ ಪ್ರದೇಶದಲ್ಲಿ ಕುಡಿಯಲು ಶುದ್ಧವಾದ ಸಿಹಿನೀರು ದೊರೆಯುವುದಿಲ್ಲ ಎಂಬುದನ್ನು ಭಕ್ತರು ಶ್ರೀ ಗುರುಗಳ ಗಮನಕ್ಕೆ ತಂದರು. ಆಗ ಪೂಜ್ಯ ಗುರುಗಳು ಶ್ರೀ ಕ್ಷೇತ್ರದ ಆಗ್ನೇಯ ಭಾಗದಲ್ಲಿ ಒಂದು ಸ್ಥಳ ತೋರಿಸಿ ಅಲ್ಲಿ ಬಾವಿ ತೋಡಲು ಹೇಳುತ್ತಾರೆ. ಏನಾಶ್ಚರ್ಯ! ಪರಿಸರದಲ್ಲೆಲ್ಲಾ ಉಪ್ಪು ನೀರೆ ದೊರೆಯುತ್ತಿದ್ದರೂ, ಗುರುಗಳು ತೋರಿಸಿದ ಸ್ಥಳದಲ್ಲಿ ಕೆಲವೇ ಅಡಿ ಆಳದಲ್ಲಿ ಸಿಹಿನೀರಿನ ಸೆಲೆ ಸಿಕ್ಕಿದ್ದನ್ನು ಕಂಡ ಭಕ್ತರು, ಶ್ರೀ ಗುರುಗಳ ಕಾರಣಿಕ ಶಕ್ತಿಯನ್ನು ಕಂಡು ಬೆರಗಾಗುತ್ತಾರೆ. ಅಂದು ನಡೆದ ಪವಾಡದಿಂದ ಪೂಜ್ಯ ಗುರುವರ್ಯರ ಹಾಗೂ ಈ ಪುಣ್ಯ ಸ್ಥಳ ಕುದ್ರೋಳಿಯ ಮಹಿಮೆಯನ್ನು ಭಕ್ತರು ಕಣ್ಣಾರೆ ಕಂಡು ಪುಳಕಿತರಾದರು. ಗುರುಗಳ ಮೇಲಿನ ಭಕ್ತಿ ಇಮ್ಮಡಿಯಾಯಿತು.
ಪೂಜ್ಯ ಗುರುಗಳಿಂದ ಶಿವಲಿಂಗ ಪ್ರತಿಷ್ಠಾಪನೆ
ಶ್ರೀ ನಾರಾಯಣ ಗುರುಗಳು ಶ್ರೀ ಕ್ಷೇತ್ರದ ಪ್ರತಿಷ್ಠಾಪನೆಗಾಗಿ ಮೂರನೆಯ ಸಲ ಮಂಗಳೂರಿಗೆ ಪಾದಾರ್ಪಣೆ ಮಾಡಿದರು. 21.2.1912ರ ಶಿವರಾತ್ರಿಯ ಪುಣ್ಯದಿನ ಬಿಲ್ಲವರು ಸೇರಿದಂತೆ ಸಮಸ್ತ ಅಸ್ಪೃಶ್ಯ ಸಮುದಾಯದ ಭಾಗ್ಯದ ಬಾಗಿಲು ತೆರೆದ ಪರ್ವಕಾಲ, ಅದೇ ದಿನ ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಅತ್ಯಂತ ಕಾರಣಿಕ ಶಕ್ತಿಯ ಶಿವಲಿಂಗವನ್ನು ಪೂಜ್ಯ ಗುರುಗಳು ತನ್ನ ದಿವ್ಯಕರಗಳಿಂದಲೇ ಪ್ರತಿಷ್ಠಾಪನೆ ಮಾಡಿದರು. ಆ ದಿನ ಈ ಸಮುದಾಯದ ಚರಿತ್ರೆಯಲ್ಲೇ ಒಂದು ಅವಿಸ್ಮರಣೀಯ ಘಟನೆಯಾಗಿ ದಾಖಲಾಯಿತು.

ಶ್ರೀ ಗುರುಗಳು ಶಿವಲಿಂಗವಿರುವ ಗರ್ಭಗುಡಿಯೊಳಗೆ ಹೋಗಿ ಶಿವಲಿಂಗಕ್ಕೆ ಪ್ರಾಣ ಪ್ರತಿಷ್ಠೆ ಮಾಡಿದರು. ಹೊರಗೆ ನಿಂತ ಭಕ್ತ ಜನಸ್ತೋಮದಿಂದ ಶಿವ ಪಂಚಾಕ್ಷರಿ ‘ಓಂ ನಮಃ ಶಿವಾಯ’ದ ಪಠಣ ಮುಗಿಲು ಮುಟ್ಟುತ್ತಿತ್ತು. ಶೂದ್ರರು ದೇವರನ್ನು ಪೂಜಿಸಬಾರದೆನ್ನುವ ಶಾಪ ವಿಮೋಚನೆಯಾಗಿ ಸಮಾಜೋತ್ಥಾನದ ಶಕೆ ಪ್ರಾರಂಭವಾಯಿತು. ಮುಂದೆ ಇದೇ ಕ್ಷೇತ್ರ ಕುದ್ರೋಳಿ ಶ್ರೀ ಗೋಕರ್ಣನಾಥನೆಂಬ ಅಭಿನಾಮದಿಂದ ಜಗದ್ವಿಖ್ಯಾತಿ ಪಡೆಯಿತು.