ಮಂಗಳೂರು: ಕೋವಿಡ್‌ನಂತಹ ಸಂಕಷ್ಟ ಕಾಲದಲ್ಲಿ ಮಂಗಳೂರು ದಸರಾ ಮಹೋತ್ಸವ ಆಯೋಜಿಸುವುದು ನಿಜಕ್ಕೂ ದೊಡ್ಡ ಸವಾಲಾಗಿತ್ತು. ಆದರೆ ದೇವರ ಇಚ್ಛೆಯೇ ಬೇರೆಯೇ ಇದ್ದು, ಶಿವಾನುಗ್ರಹದಿಂದ ಇದು ಸಾಧ್ಯವಾಗಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದ ಅಭಿವೃದ್ಧಿಯ ರೂವಾರಿ, ಕೇಂದ್ರದ ಮಾಜಿ ಸಚಿವ ಜನಾರ್ದನ ಪೂಜಾರಿ ಹೇಳಿದರು.
ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ಶನಿವಾರ ಸಂಜೆ ದಸರಾ ಮಹೋತ್ಸವವನ್ನು ದೀಪ ಬೆಳಗಿ ಉದ್ಘಾಟಿಸಿದ ಬಳಿಕ ಅವರು ಮಾತನಾಡಿದರು.
ಮಂಗಳೂರು ದಸರಾ ಮಹೋತ್ಸವವನ್ನು ಹಲವು ವರ್ಷಗಳಿಂದ ಶ್ರೀ ಗೋಕರ್ಣನಾಥ ದೇವರು ಚೆನ್ನಾಗಿ ಮುನ್ನಡೆಸಿಕೊಂಡು ಹೋಗುತ್ತಿದ್ದಾರೆ. ಅವರ ಆಶೀರ್ವಾದವೇ ನಮಗೆಲ್ಲರಿಗೂ ಶಕ್ತಿ. ದೇವರು ಎಲ್ಲರಿಗೂ ಒಳ್ಳೆಯದನ್ನೇ ಮಾಡಲಿ ಎಂದು ಹರಸಿದರು.
ಯಶಸ್ಸಿಗೆ ಸಹಕರಿಸಿ: ಕೋವಿಡ್ ಜಗತ್ತಿನಾದ್ಯಂತ ಹರಡಿದ್ದು, ಸೋಂಕು ನಿಯಂತ್ರಿಸಲು ಸರಕಾರ ಕೆಲವೊಂದು ಕಟ್ಟು ನಿಟ್ಟಿನ ಕ್ರಮಗಳನ್ನು ತೆಗೆದುಕೊಂಡಿದೆ. ಸರಕಾರದ ನಿಯಮ ಹಾಗೂ ದೇವಳದ ಆಡಳಿತ ಮಂಡಳಿ ಸೂಚನೆಗಳಿಗೆ ನಾವೆಲ್ಲರೂ ಪಾಲಿಸೋಣ. ಯಾವುದೇ ಗೊಂದಲಕ್ಕೆ ಎಡೆಮಾಡಿಕೊಡದೆ, ಯಾರ ನೋವಿಗೂ ಕಾರಣವಾಗದೆ ಹಬ್ಬವನ್ನು ಸಂಭ್ರಮಿಸೋಣ ಎಂದು ಪೂಜಾರಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಗೋಕರ್ಣನಾಥ ಕ್ಷೇತ್ರದ ಅಧ್ಯಕ್ಷ ಹೆಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ. ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ, ಕೆ. ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ದೇವೇಂದ್ರ ಪೂಜಾರಿ, ಹರಿಕೃಷ್ಣ ಬಂಟ್ವಾಳ್, ಬಿ.ಜಿ.ಸುವರ್ಣ, ಮಾಜಿ ಸಚಿವ ಅಭಯಚಂದ್ರ ಜೈನ್, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಬಿಜೆಪಿ ಜಿಲ್ಲಾಧ್ಯಕ್ಷ ಸುದರ್ಶನ್ ಮೂಡುಬಿದಿರೆ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ರಾಮ್‌ದಾಸ್, ಕಾರ್ಪೊರೇಟರ್‌ಗಳಾದ ಅನಿಲ್ ಪೂಜಾರಿ, ಸುಧೀರ್ ಶೆಟ್ಟಿ, ಯೋಗೀಶ್ ಮೂಲ್ಕಿ ಮತ್ತಿತರರು ಉಪಸ್ಥಿತರಿದ್ದರು.

ಆಡಳಿತ ಮಂಡಳಿ ಸ್ವಾಗತ: ಸಂಜೆ 6ಗಂಟೆ ವೇಳೆಗೆ ಶ್ರೀ ಕ್ಷೇತ್ರಕ್ಕೆ ಆಗಮಿಸಿದ ಜನಾರ್ದನ ಪೂಜಾರಿ ಅವರನ್ನು ಕ್ಷೇತ್ರದ ಆಡಳಿತ ಸಮಿತಿಯ ಪದಾಧಿಕಾರಿಗಳು ಬರಮಾಡಿಕೊಂಡರು. ದರ್ಬಾರು ಮಂಟಪಕ್ಕೆ ತೆರಳಿ ಮಹಾಗಣಪತಿ, ಆದಿಶಕ್ತಿ, ನವದುರ್ಗೆಯರ ಸಹಿತ ಶಾರದಾ ಮಾತೆಯ ವಿಗ್ರಹಗಳನ್ನು ವೀಕ್ಷಿಸಿ ಪೂಜೆ ನೆರವೇರಿಸಿದ ಬಳಿಕ ದಸರಾ ಮಹೋತ್ಸವಕ್ಕೆ ಚಾಲನೆ ನೀಡಿದರು.
ಸಂಕೀರ್ತನೆಯಲ್ಲಿ ತಲ್ಲೀನ: ದಸರಾ ಮಹೋತ್ಸವ ಉದ್ಘಾಟನೆ ಬಳಿಕ ಭಜನಾ ಮಂಡಳಿಯವರ ಸಂಕೀರ್ತನೆಯನ್ನು ಕೇಳಿ ಅಲ್ಲಿಗೆ ತೆರಳಿದ ಪೂಜಾರಿಯವರು, ಅಲ್ಲೇ ಕೆಲಹೊತ್ತು ಭಜನೆ ಕೇಳುತ್ತಾ ತಲ್ಲೀನರಾದರು. ಬಳಿಕ ದೇವಾಲಯದೊಳಕ್ಕೆ ತೆರಳಿ ದೇವರ ದರ್ಶನ ಪಡೆದರು.