ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ವತಿಯಿಂದ ‘ಮಂಗಳೂರು ದಸರಾ ಮಹೋತ್ಸವ’ ಕೋವಿಡ್ ಆರೋಗ್ಯ ವಿಷಮ ಸ್ಥಿತಿ ಹಿನ್ನೆಲೆ ದೇವಸ್ಥಾನದ ವಿಧಿ ವಿಧಾನಗಳ ಸಂಪ್ರದಾಯಂತೆ ನಡೆಯುತ್ತಿದ್ದು, ಇಲ್ಲಿನ ಅನ್ನದಾನ ಸೇವೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
‘ನಮ್ಮ ದಸರಾ- ನಮ್ಮ ಸುರಕ್ಷೆ’ ಘೋಷವಾಕ್ಯದೊಂದಿಗೆ ನಡೆಯುವ ಉತ್ಸವವಾಗಿರುವುದರಿಂದ ಕ್ಷೇತ್ರಕ್ಕೆ ಆಗಮಿಸುವ ಭಕ್ತರಿಗೆ ಸಕಾರ್ರರದ ನಿಯಮಾವಳಿಯಲ್ಲದೆ, ಕ್ಷೇತ್ರಾಡಳಿತ ವತಿಯಿಂದ ಮತ್ತಷ್ಟು ಕಠಿಣ ಕ್ರಮ ಕೈಗೊಳ್ಳಲಾಗುತ್ತಿದೆ. ಸತತ 5ನೇ ದಿನವೂ ಅನ್ನಪ್ರಸಾದವನ್ನು ಹಾಳೆತಟ್ಟೆಯಲ್ಲಿ ನೀಡಲಾಗುತ್ತಿದೆ. ಅನ್ನಪ್ರಸಾದ ತಯಾರಿಕೆಯಿಂದ ಹಿಡಿದು, ಹಾಳೆಯ ಬೌಲ್‌ನಲ್ಲಿ ಪ್ಯಾಕ್ ಮಾಡುವವರೆಗೂ ಸುರಕ್ಷತಾ ನಿಯಮ ಪಾಲಿಸಿಕೊಂಡು ಬರಲಾಗುತ್ತಿದೆ.

ಹಾಳೆಯ ಬೌಲ್‌ಗಳನ್ನು ನೀರಿನಲ್ಲಿ ತೊಳೆದು, ಪ್ರಸಾದ ಪ್ಯಾಕ್ ಮಾಡುವವರಿಗೆ ಮುಖಕ್ಕೆ ಮಾಸ್ಕ್, ಫೇಸ್ ಶೀಲ್ಡ್, ಕೈಗೆ ಗ್ಲೌಸ್ ಕಡ್ಡಾಯಗೊಳಿಸಲಾಗಿದೆ. ದೇವಸ್ಥಾನದ ಆವರಣದಿಂದ ಹಿಡಿದು ಅನ್ನಪಪ್ರಸಾದ ತಯಾರು ಮಾಡುವವರೆಗೂ ಶುಚಿತ್ವಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದ್ದು, ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ.
ಸತತ ಐದನೇ ದಿನವೂ ಪ್ರತಿದಿನ ಮಧ್ಯಾಹ್ನದ ಮಹಾಪೂಜೆ ಬಳಿಕ 2.30ತನಕ ಸುಮಾರು 3500 ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ. ಯುವವಾಹಿನಿಯ ವಿವಿಧ ಘಟಕ, ವಿವಿಧ ಕಡೆಯ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ, ಬಿಲ್ಲವ ಯುವ ವೇದಿಕೆ ಉಡುಪಿ, ಆತ್ಮಶಕ್ತಿ ಬ್ಯಾಂಕ್, ಗೋಕರ್ಣನಾಥ ಸೇವಾದಳ, ವಿವಿಧ ವಿದ್ಯಾರ್ಥಿ ಸಂಘಟನೆ ಸಹಿತ ಬೇರೆ ಬೇರೆ ಸಂಘಟನೆಗಳ ಸದಸ್ಯರ ಫಲಾಪೇಕ್ಷೆ ಇಲ್ಲದ ಸಹಕಾರವೇ ಈ ಅಭೂತಪೂರ್ವ ಯಶಸ್ಸಿಗೆ ಕಾರಣ ಎನ್ನುತ್ತಾರೆ ಕ್ಷೇತ್ರಾಡಳಿತ ಮಂಡಳಿಯವರು. ಪ್ರತಿದಿನ ಸುಮಾರು 300-350 ಮಂದಿ ವಿವಿಧ ಸಂಘ, ಸಂಸ್ಥೆಗಳ ಸ್ವಯಂ ಸೇವಕರು ಸೇವೆಯಲ್ಲಿ ತೊಡಗುತ್ತಿದ್ದಾರೆ.