ಮಂಗಳೂರು: ಮಂಗಳೂರು ದಸರಾ ಮಹೋತ್ಸವ `ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ನಡೆಯುತ್ತಿದ್ದು ಇದಕ್ಕೆ ಭಕ್ತರಿಂದ ಉತ್ತಮ ಸ್ಪಂದನೆಯೂ ವ್ಯಕ್ತವಾಗುತ್ತಿದೆ. ಈ ಬಾರಿ ಮಂಗಳೂರು ದಸರಾವನ್ನು ಸರಳವಾಗಿ ಆಚರಿಸಲು ಆಡಳಿತ ಮಂಡಳಿ ನಿರ್ಧರಿಸಿತ್ತಾದರೂ, ಕೊನೇ ಕ್ಷಣದಲ್ಲಿ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಸೂಚನೆಯಂತೆ ನಗರದ ರಾಜಬೀದಿಯನ್ನೂ ವಿದ್ಯುದ್ದೀಪಾಲಂಕಾರಗೊಳಿಸಲಾಗಿದೆ.

ಮಂಗಳೂರು ದಸರಾದ ಬಗ್ಗೆ ಪ್ರತಿನಿತ್ಯ ಮನೆಯಿಂದಲೇ ವರದಿ ಪಡೆಯುತ್ತಿರುವ ಜನಾರ್ದನ ಪೂಜಾರಿಯವರು ನಗರವನ್ನು ವಿದ್ಯುದ್ದೀಪಾಲಂಕಾರ ಮಾಡದಿರುವ ಬಗ್ಗೆ ತಿಳಿದು ಬೇಸರ ವ್ಯಕ್ತಪಡಿಸಿದರು. ಮಂಗಳೂರು ದಸರಾ ವೈಭವಕ್ಕೆ ರಾಜಬೀದಿ ಅಲಂಕಾರವೂ ವಿಶಿಷ್ಟವಾಗಿದ್ದು, ಕೂಡಲೇ ಎಂ.ಜಿ. ರಸ್ತೆಯವರೆಗೆ ವಿದ್ಯುದ್ದೀಪಾಲಂಕಾರ ಮಾಡಿ ಎಂದು ತಾಕೀತು ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಕುದ್ರೋಳಿ ದೇವಳದಿಂದ ಪಿವಿಎಸ್ ವೃತ್ತದವರೆಗೆ ವಿದ್ಯುದ್ದೀಪಾಲಂಕಾರ ಮಾಡಲಾಗಿದೆ.

ಪ್ರಾಯೋಜಕರು ರಾಜಬೀದಿಯ ವಿದ್ಯುದ್ದೀಪಾಲಂಕಾರದ ಪ್ರಾಯೋಜಕತ್ವವನ್ನು ಮಂಗಳೂರು ಮಹಾನಗರ ಪಾಲಿಕೆ, ದ.ಕ. ಜಿಲ್ಲಾ ಯುವಕಾಂಗ್ರೆಸ್ ಅಧ್ಯಕ್ಷ ಮಿಥುನ್ ರೈ, ಯಜ್ಞೇಶ್ ನೇತೃತ್ವದ ಬರ್ಕೆ ಫ್ರೆಂಡ್ಸ್ ಉದಯ ಪೂಜಾರಿ ನೇತೃತ್ವದ ಬಿರುವೆರ್ ಕುಡ್ಲ, ತಿಲಕ್ ಕೋಟ್ಯಾನ್ ನೇತೃತ್ವ ಕಾಳಿಚರಣ್ ಫ್ರೆಂಡ್ಸ್ ವಹಿಸಿಕೊಂಡಿದೆ. ಇದೇ ರೀತಿ ಮಹಾನಗರ ಪಾಲಿಕೆ ಕಟ್ಟಡ, ಕದ್ರಿ ಪೊಲೀಸ್ ಠಾಣೆ ಸೇರಿದಂತೆ ನಗರದ ನಾನಾ ಸಂಸ್ಥೆಗಳು ತಮ್ಮ ಕಟ್ಟಡಗಳಿಗೆ ವಿದ್ಯುದ್ದೀಪಾಲಂಕರಗೊಳಿಸಿವೆ.
ಶಿಸ್ತುಬದ್ಧ ಉತ್ಸವ: ಮಂಗಳೂರು ದಸರಾ ಮಹೋತ್ಸವಕ್ಕೆ ಸುವ್ಯವಸ್ಥಿತ ಸಿದ್ಧತೆ ಮಾಡಲಾಗಿದ್ದು ಇದರ ಭಕ್ತರು ಕೂಡಾ ಪೂರಕವಾಗಿ ಸ್ಪಂದಿಸಿದ್ದಾರೆ. ದೇವಳ ಪ್ರಾಂಗಣ ಪ್ರವೇಶವಾಗುತ್ತಿದ್ದಂತೆ ಥರ್ಮಾಲ್ ಸ್ಕಾನ್ ಸ್ಯಾನಿಟೈಸರ್ ಬಳಸಲಾಗುತ್ತಿದೆ. ಮಾಸ್ಕ್ ಧರಿಸಿಯೇ ಪ್ರಾಂಗಣ ಪ್ರವೇಶಿಸಲು ಸೂಚನೆ ನೀಡಲಾಗುತ್ತಿದ್ದು ಮೊಬೈಲ್ ಬಳಕೆಯನ್ನು ನಿರ್ಬಂಧಿಸಲಾಗಿದೆ. ಸರತಿ ಸಾಲಿನಲ್ಲಿಯೇ ಭಕ್ತರು ದೇವರ ದರ್ಶನ ಮಾಡುತ್ತಿದ್ದಾರೆ. ಸಾಂಸ್ಕೃತಿಕ ಕಾರ್ಯಕ್ರಮವನ್ನು ವರ್ಚುವಲ್ ಮಾದರಿ ಪ್ರಸಾರ ಮಾಡಲಾಗುತ್ತಿದ್ದು, ನಮ್ಮಕುಡ್ಲ ವಾಹಿನಿ ಸೇರಿದಂತೆ 4 ಸಾಮಾಜಿಕ ಜಾಲತಾಣ ಮೂಲಕ ನೇರ ಪ್ರವೇಶ ಮಾಡಲಾಗಿದೆ.

ಅನ್ನಪ್ರಸಾದವನ್ನು ಹಾಳೆತಟ್ಟೆಯಲ್ಲಿ ನೀಡಲಾಗುತ್ತಿದ್ದು ಅನ್ನಪ್ರಸಾದ ತಯಾರಿಕೆಯಿಂದ ಹಿಡಿದು, ಹಾಳೆಯ ಬೌಲ್‌ನಲ್ಲಿ ಪ್ಯಾಕ್ ಮಾಡುವವರೆಗೂ ಸುರಕ್ಷತಾ ನಿಯಮ ಪಾಲಿಸಿಕೊಂಡು ಬರಲಾಗುತ್ತಿದೆ. ಹಾಳೆಯ ಬೌಲ್‌ಗಳನ್ನು ನೀರಿನಲ್ಲಿ ತೊಳೆದು, ಪ್ರಸಾದ ಪ್ಯಾಕ್ ಮಾಡುವವರಿಗೆ ಮುಖಕ್ಕೆ ಮಾಸ್ಕ್, ಫೇಸ್ ಶೀಲ್ಡ್ ಕೈಗೆ ಗ್ಲೌಸ್ ಕಡ್ಡಾಯಗೊಳಿಸಲಾಗಿದೆ. ಮಧ್ಯಾಹ್ನ ಮಹಾಪೂಜೆ ಬಳಿಕ 2.30ತನಕ ಸುಮಾರು 3,500 ಮಂದಿ ಅನ್ನಪ್ರಸಾದ ಸ್ವೀಕರಿಸುತ್ತಿದ್ದಾರೆ
ವರದಿ : ಚಾರ್ವಿ ವಿ. ಕೋಟ್ಯಾನ್