ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅ.17ರಿಂದ 26ರ ತನಕ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಆಶಯದಂತೆ ನಮ್ಮ ದಸರಾ-ನಮ್ಮ ಸುರಕ್ಷೆ’ ಘೋಷವಾಕ್ಯದಡಿ ಸಾಂಪ್ರದಾಯಿಕವಾಗಿ ನಡೆಯಲಿರುವ ಮಂಗಳೂರು ದಸರಾ ಮಹೋತ್ಸವಕ್ಕೆ ಗುರುವಾರ ಚಾಲನೆ ದೊರೆಯಿತು.
ಬೆಳಗ್ಗೆ ಗುರು ಪ್ರಾರ್ಥನೆ, ನವಕಲಶಾಭಿಷೇಕ, ಕಲಶ ಸ್ಥಾಪನೆ, ನವದುರ್ಗೆ ಮತ್ತು ಶಾರದಾ ಪ್ರತಿಷ್ಠಾಪನೆ, ಪುಷ್ಪಾಲಂಕಾರ ಮಹಾಪೂಜೆ, ಭಜನಾ ಕಾರ್ಯಕ್ರಮ, ಶ್ರೀದೇವಿ ಪುಷ್ಪಾಲಂಕಾರ ಮಹಾಪೂಜೆ ಉತ್ಸವ ನೆರವೇರಿತು.

ಆರಂಭದಲ್ಲಿ ಶಾರದಾಮಾತೆಯ ವಿಗ್ರಹದ ಕ್ಷೇತ್ರ ಪ್ರದಕ್ಷಿಣೆ ಬಂದ ಬಳಿಕ ಕ್ಷೇತ್ರದ ಗೋಕರ್ಣನಾಥ ಕಲ್ಯಾಣ ಮಂಟಪದ ದರ್ಬಾರ್ ಹಾಲ್‌ನಲ್ಲಿ ಶ್ರೀ ಶಾರದಾ ಮಾತೆ, ಗಣೇಶನೊಂದಿಗೆ, ಬ್ರಹ್ಮಚಾರಿಣಿ, ಚಂದ್ರಘಂಟ, ಕೂಷ್ಮಾಂಡಿನಿ, ಸಿದ್ಧಿದಾತ್ರಿ, ಮಹಾಗೌರಿ, ಮಹಾಕಾಳಿ, ಕಾತ್ಯಾಯಿನಿ, ಸ್ಕಂದಮಾತೆ, ಆದಿಶಕ್ತಿ, ಶೈಲಪುತ್ರಿ ವಿಗ್ರಹವನ್ನು ಪ್ರತಿಷ್ಠಾಪಿಸಲಾಯಿತು. ಕೋವಿಡ್ ವಾರಿಯರ್, ಎನ್‌ಆರ್‌ಐ ಫೋರಂ ಮಾಜಿ ಅಧ್ಯಕ್ಷೆ ಡಾ.ಆರತಿ ಕೃಷ್ಣ ದಸರಾ ಮಹೋತ್ಸವಕ್ಕೆ ಮಧ್ಯಾಹ್ನ ಅಧಿಕೃತ ಚಾಲನೆ ನೀಡಿದರು.
ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಉಪಾಧ್ಯಕ್ಷ ರಾಘವೇಂದ್ರ ಕೂಳೂರು, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್, ಟ್ರಸ್ಟಿಗಳಾದ, ರವಿಶಂಕರ ಮಿಜಾರ್, ಕೆ.ಮಹೇಶ್ಚಂದ್ರ, ಕ್ಷೇತ್ರಾಡಳಿತ ಮಂಡಳಿ ಅಭಿವೃದ್ಧಿ ಸಮಿತಿಯ ಸದಸ್ಯರಾದ ಹರಿಕೃಷ್ಣ ಬಂಟ್ವಾಳ್, ದೇವೇಂದ್ರ ಪೂಜಾರಿ, ಡಾ.ಬಿ.ಜಿ.ಸುವರ್ಣ, ಮಂಗಳೂರು ಮಹಾನಗರ ಪಾಲಿಕೆ ಸದಸ್ಯ ಅನಿಲ್ ಕುಮಾರ್ ಮೊದಲಾದವರು ಉಪಸ್ಥಿತರಿದ್ದರು.

ಆಕರ್ಷಕ ದರ್ಬಾರ್:
ನವದುರ್ಗೆಯರನ್ನು ಪ್ರತಿಷ್ಠಾಪಿಸುವ ದರ್ಬಾರ್ ಮಂಟಪ ಆಕರ್ಷಕವಾಗಿ ಕಂಗೊಳಿಸುತ್ತಿದೆ. ಶಾರದಾ ಮಂಟಪ ಅತ್ಯಾಕರ್ಷಕ ಬಣ್ಣ ಬಣ್ಣದ ವಿದ್ಯುದ್ದೀಪಾಲಂಕಾರ ಮತ್ತಷ್ಟು ಮೆರುಗು ನೀಡಿದೆ.
ಅಚ್ಚುಕಟ್ಟಿನ ವ್ಯವಸ್ಥೆ :
ಕೋವಿಡ್ ಆರೋಗ್ಯ ವಿಷಮ ಪರಿಸ್ಥಿತಿಯಲ್ಲಿ ನಡೆಯುವ ಉತ್ಸವವಾಗಿದ್ದರಿಂದ ಮೊದಲ ದಿನವೇ ಅಚ್ಚುಕಟ್ಟಾದ ವ್ಯವಸ್ಥೆಯಿಂದ ಕ್ಷೇತ್ರದ ಆಡಳಿತ ಮಂಡಳಿಯು ಸರ್ವರ ಪ್ರಶಂಸೆಗೆ ಪಾತ್ರವಾಯಿತು. 6 ವರ್ಷದ ಒಳಗಿನ ಮಕ್ಕಳಿಗೆ ಪ್ರವೇಶ ಇರಲಿಲ್ಲ. ಸ್ವಯಂಪ್ರೇರಿತವಾಗಿ ಭಕ್ತಾದಿಗಳು ಮಾಸ್ಕ್ ಧರಿಸಿಕೊಂಡು ಕ್ಷೇತ್ರಕ್ಕೆ ಆಗಮಿಸಿರುವುದು ಶ್ಲಾಘನೀಯ. ದೇವಸ್ಥಾನ ಪ್ರವೇಶ ಮೊದಲು ಥರ್ಮಲ್ ಸ್ಕ್ಯಾನ್ ಮಾಡಿ ಭಕ್ತಾದಿಗಳಿಗೆ ಪ್ರವೇಶ ನೀಡಲಾಯಿತು.
ಶಿಸ್ತುಬದ್ಧ ಸ್ವಯಂಸೇವಕರು :
ವಿವಿಧ ಸಂಘಟನೆಯ ಸ್ವಯಂ ಸೇವಕರು ಕ್ಷೇತ್ರದ ನಿಯಮಗಳಿಗೆ ಅನುಗುಣವಾಗಿ ಮಂಗಳೂರು ದಸರಾ ಶಿಸ್ತುಬದ್ದವಾಗಿ ನಡೆಯಲು ಸಹಕಾರ ನೀಡಿದರು.
ಯುವವಾಹಿನಿ ಮಂಗಳೂರು ಹಾಗೂ ಕಂಕನಾಡಿ ಘಟಕ, ಬಿರುವೆರ್ ಕುಡ್ಲ ಮೂಡುಬಿದಿರೆ, ಬಜಪೆ ಹಾಗೂ ಬಂಟ್ವಾಳ ಘಟಕಗಳು, ಕ್ಷೇತ್ರದ ಸೇವಾ ದಳ ಹೀಗೆ ಒಟ್ಟು 175 ಸದಸ್ಯರು ಸ್ವಯಂಸೇವಕರಾಗಿ ವಿವಿಧ ಕಾರ್ಯಗಳಲ್ಲಿ ಭಾಗವಹಿಸಿ ಶಿಸ್ತುಬದ್ಧ ವ್ಯವಸ್ಥೆಗೆ ಸಹಕರಿಸಿದರು.