ದೇವತಾ ಕಾರ್ಯದಲ್ಲಿ ತೊಡಗಿಸಿಕೊಂಡ ಸ್ವಯಂಸೇವಕರು ಫಲಾಫೇಕ್ಷೆ ಬಯಸದೆ ಶಿಸ್ತಿನ ಸೇವೆಯಿಂದ ಮಂಗಳೂರು ದಸರಾ ಯಶಸ್ವಿಯಾಗಿ ಮುನ್ನಡೆಯುತ್ತಿದೆ ಎಂದು ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ ಆರ್. ಪದ್ಮರಾಜ್ ತಿಳಿಸಿದರು.

‘ಸೇವೆ ಸ್ವಾರ್ಥರಹಿತವಿದ್ದರೆ ಮಾತ್ರ ಹೆಚ್ಚಿನ ಮೌಲ್ಯ ಪಡೆಯುತ್ತದೆ… ಎಂಬ ಮಾತಿನಂತೆ ಯಾವುದೇ ಸ್ವಾರ್ಥವಿಲ್ಲದೆ, ಪ್ರೀತಿ ಮತ್ತು ಕರ್ತವ್ಯಗಳ ಸಮ್ಮಿಶ್ರಣವೇ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ‘ಮಂಗಳೂರು ದಸರಾ’ ಮಹೋತ್ಸವದಲ್ಲಿ ಕಂಡುಬರುತ್ತಿದೆ ಎಂದು ಪದ್ಮಾರಾಜ್ ತಿಳಿಸಿದರು.
ಕೋವಿಡ್ ವಿಷಮ ಪರಿಸ್ಥಿತಿಯಲ್ಲಿ ದಸರಾ ಮಹೋತ್ಸವ ನಡೆಸುವುದೇ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತುಗೆ ಒಂದು ರೀತಿಯ ಸವಾಲಾಗಿತ್ತು. ಆದರೆ ಯಾವುದೇ ಫಲಾಪೇಕ್ಷೆ ಬಯಸದೆ ದುಡಿಯುವ ಸ್ವಯಂಸೇವಕರಿದ್ದರೆ ಯಾವುದೂ ಸವಾಲು ಅಲ್ಲ ಎನ್ನುವುದನ್ನು ಕಳೆದ ಕೆಲವು ದಿನಗಳಿಂದ ವಿವಿಧ ಸಂಘ ಸಂಸ್ಥೆಗಳ ಸದಸ್ಯರು ತೋರಿಸಿಕೊಟ್ಟಿದ್ದಾರೆ.

ಪ್ರತಿದಿನ ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಉತ್ಸವಕ್ಕೆ 250ರಿಂದ 300ರಷ್ಟು ಸ್ವಯಂಸೇವಕರು ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸುವ ಮೂಲಕ ‘ದಸರಾ ಮಹೋತ್ಸವ’ ಸಂಘಟಕರ ಪ್ರಶಂಸೆಗೆ ಪಾತ್ರರಾಗಿದ್ದಾರೆ.

ದಸರಾ ಆರಂಭಕ್ಕೆ ಮೂರು ವಾರ ಮೊದಲೇ ಗೋಕರ್ಣನಾಥ ಸೇವಾದಳ, ಸಹಿತ ವಿವಿಧ ಸಂಘ ಸಂಸ್ಥೆಗಳ ಸದಸ್ಯರು, ಕ್ಷೇತ್ರದ ಭಕ್ತರು ಸೇವಾ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದರು, ಬಳಿಕ ಉಡುಪಿ ಜಿಲ್ಲಾ ಬಿಲ್ಲವ ಯುವ ವೇದಿಕೆ, ಬಿರ್ವೆರ್ ಕುಡ್ಲದ ವಿವಿಧ ಘಟಕಗಳ ಸದಸ್ಯರು, ಯುವವಾಹಿನಿ ಸಂಸ್ಥೆಯ ವಿವಿಧ ಘಟಕಗಳ ಸದಸ್ಯರು, ಕಿನ್ಯ ಬೆಳರಿಂಜೆ ಬಿಲ್ಲವ ಸಂಚಲನ ಸಮಿತಿ, ಶ್ರೀರಾಮ ಭಜನಾ ಮಂದಿರ ದೇರೆಬೈಲು, ಜಪ್ಪಿನಮೊಗರು ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಸದಸ್ಯರು, ಎಬಿವಿಪಿ ಸದಸ್ಯರು, ಗ್ರಾಮಚಾವಡಿ ಬ್ರಹ್ಮಶ್ರೀ ನಾರಾಯಣಗುರು ಸೇವಾ ಸಂಘ ಸದಸ್ಯರು, ಕಾವೂರು ಬ್ರಹ್ಮಶ್ರೀ ನಾರಾಯಣ ಗುರು ಸೇವಾ ಸಂಘ ಸದಸ್ಯರು, ಆತ್ಮಶಕ್ತಿ ಬ್ಯಾಂಕ್, ಬ್ರಹ್ಮಶ್ರೀ ನಾರಾಯಣಗುರು ಸಮಾಜ ಸೇವಾ ಸಂಘ ಹಳೆಯಂಗಡಿ, ಶ್ರೀ ನಾರಾಯಣಗುರು ಧರ್ಮಪರಿಪಾಲನ ಸಂಘ ಕೋಡಿಕಲ್, ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಬಿಲ್ಲವ ಸಮಿತಿ ಮತ್ತು ಮಹಿಳಾ ಗ್ರಾಮ ಸಮಿತಿ ಉಪ್ಪಿನಂಗಡಿ, ಹಳೆಯಂಗಡಿ ಬಿಲ್ಲವ ಸಂಘ, ಉರ್ವ ಬಿಲ್ಲವ ಸಂಘ ದಕ್ಷಿಣ ಕನ್ನಡ ಜಿಲ್ಲಾ ಮಹಿಳಾ ಕಾಂಗ್ರೆಸ್ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳು ಕ್ಷೇತ್ರದ ಸೇವಾ ಚಟುವಟಿಕೆಯಲ್ಲಿ ತೊಡಗಿಕೊಂಡಿವೆ.

ಶ್ರೀಕ್ಷೇತ್ರದಲ್ಲಿ ನಡೆಯುತ್ತಿರುವ ಉತ್ಸವದಲ್ಲಿ ಪಾರ್ಕಿಂಗ್, ಅನ್ನದಾನ ಸೇವೆ, ಸಾಂಸ್ಕೃತಿಕ ಕಾರ್ಯಕ್ರಮ, ಕೋವಿಡ್ ನಿಯಮ ಪಾಲನೆ ಸಹಿತ ಪ್ರತಿಯೊಂದು ವ್ಯವಸ್ಥೆಯೂ ಅಚ್ಚಕಟ್ಟಾಗಿ ನಡೆಯಲು ಸ್ವಯಂಸೇವಕರ ಮಹಾಸೇವೆಯ ಪ್ರಮುಖ ಕಾರಣ ಎನ್ನುತ್ತಾರೆ ಕ್ಷೇತ್ರಾಡಳಿತ ಮತ್ತು ಅಭಿವೃದ್ಧಿ ಸಮಿತಿಯ ಸದಸ್ಯರು ಸಂತಸ ವ್ಯಕ್ತಪಡಿಸಿದ್ದಾರೆ