ಮಂಗಳೂರು : ಬ್ರಹ್ಮಶ್ರೀ ನಾರಾಯಣ ಗುರುಗಳು ಶ್ರೀ ಕ್ಷೇತ್ರದ ಪ್ರತಿಷ್ಠಾಪನೆಗಾಗಿ ಮೂರನೆಯ ಸಲ ಮಂಗಳೂರಿಗೆ ಪಾದಾರ್ಪಣೆ ಮಾಡಿದರು. 21.2.1912ರ ಶಿವರಾತ್ರಿಯ ಪುಣ್ಯದಿನ ಬಿಲ್ಲವರು ಸೇರಿದಂತೆ ಸಮಸ್ತ ಅಸ್ಪೃಶ್ಯ ಸಮುದಾಯದ ಭಾಗ್ಯದ ಬಾಗಿಲು ತೆರೆದ ಪರ್ವಕಾಲ… ಅದೇ ದಿನ ಮಧ್ಯಾಹ್ನ ಅಭಿಜಿನ್ ಮುಹೂರ್ತದಲ್ಲಿ ಅತ್ಯಂತ ಕಾರಣಿಕ ಶಕ್ತಿಯ ಶಿವಲಿಂಗವನ್ನು ಪೂಜ್ಯ ಗುರುಗಳು ತನ್ನ ದಿವ್ಯಕರಗಳಿಂದಲೇ ಪ್ರತಿಷ್ಠಾಪನೆ ಮಾಡಿದರು. ಆ ದಿನ ಈ ಸಮುದಾಯದ ಚರಿತ್ರೆಯಲ್ಲೇ ಒಂದು ಅವಿಸ್ಮರಣೀಯ ಘಟನೆಯಾಗಿ ದಾಖಲಾಯಿತು.

ಶ್ರೀ ಗುರುಗಳು ಶಿವಲಿಂಗವಿರುವ ಗರ್ಭಗುಡಿಯೊಳಗೆ ಹೋಗಿ ಶಿವಲಿಂಗಕ್ಕೆ ಪ್ರಾಣ ಪ್ರತಿಷ್ಠಾಮಾಡಿದರು. ಹೊರಗೆ ನಿಂತ ಭಕ್ತ ಜನಸ್ತೋಮದಿಂದ ಶಿವ ಪಂಚಾಕ್ಷರಿ ‘ಓಂ ನಮಃ ಶಿವಾಯ’ದ ಪಠಣ ಮುಗಿಲು ಮುಟ್ಟುತ್ತಿತ್ತು. ಶೂದ್ರರು ದೇವರನ್ನು ಪೂಜಿಸಬಾರದೆನ್ನುವ ಶಾಪ ವಿಮೋಚನೆಯಾಗಿ ಸಮಾಜೋತ್ಥಾನದ ಶಕೆ ಪ್ರಾರಂಭವಾಯಿತು. ಮುಂದೆ ಇದೇ ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ ಅಭಿನಾಮದಿಂದ ಜಗದ್ವಿಖ್ಯಾತಿ ಪಡೆಯಿತು.