ಮಂಗಳೂರು : ವರ್ಷಂಪ್ರತಿ ರಾತ್ರಿಯಿಡೀ ಅಸಂಖ್ಯಾತ ಟ್ಯಾಬ್ಲೊಗಳೊಂದಿಗೆ ನವದುರ್ಗೆಯರು, ಗಣಪತಿ, ಶಾರದೆ, ನಾರಾಯಣ ಗುರುಗಳ ಮೂರ್ತಿ ಸಹಿತ ವೈಭವದ ಶೋಭಾಯಾತ್ರೆ ನಡೆಯುತ್ತಿತ್ತು. ಈ ಬಾರಿ ಕೋವಿಡ್-19 ಹಿನ್ನೆಲೆಯಲ್ಲಿ ದಸರಾ ಶೋಭಾಯಾತ್ರೆ ಬದಲಿಗೆ, ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲಾಯಿತು.

ಈ ಟ್ಯಾಬ್ಲೋ ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ಸರ್ಕಲ್, ಕೆಎಸ್ ರಾವ್ ರಸ್ತೆ, ಪಿಎಂ ರಾವ್ ರೋಡ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗಕ್ಕೆ ಬಂದು ವಿ.ಟಿ.ರಸ್ತೆ ಮೂಲಕ ನವಭಾರತ್ ಸರ್ಕಲ್‌ಗೆ ಮರಳಿ ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಿತು.

ದೇವಸ್ಥಾನದ ಅಧ್ಯಕ್ಷ ಎಚ್.ಎಸ್. ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಕೋಶಾಧಿಕಾರಿ ಪದ್ಮರಾಜ್ ಆರ್., ಟ್ರಸ್ಟಿಗಳಾದ ಶೇಖರ್ ಪೂಜಾರಿ, ರವಿಶಂಕರ್ ಮಿಜಾರು, ಅಭಿವೃದ್ಧಿ ಸಮಿತಿಯ ವೇದಕುಮಾರ್, ಹರಿಕೃಷ್ಣ ಬಂಟ್ವಾಳ, ಡಾ.ಬಿ.ಜಿ.ಸುವರ್ಣ, ರಮಾನಾಥ ಕಾರಂದೂರು ಉಪಸ್ಥಿತರಿದ್ದರು.
ಸೀಯಾಳಾಭಿಷೇಕ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ದಸರಾ ಮಹೋತ್ಸವ ಅಂಗವಾಗಿ ಭಾನುವಾರ ಗೋಕರ್ಣನಾಥ ದೇವರಿಗೆ ಶತಸೀಯಾಳಾಭಿಷೇಕ ನಡೆಯಿತು. ಸರಸ್ವತೀ ದುರ್ಗಾಹೋಮ, ಶತ ಸೀಯಾಳಾಭಿಷೇಕ, ಶಿವಪೂಜೆ, ಅನ್ನಸಂತರ್ಪಣೆ, ಸಂಜೆ ಭಜನಾ ಕಾರ್ಯಕ್ರಮ, ರಾತ್ರಿ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ ನಡೆಯಿತು.

ಇಂದು ಗುರುಪೂಜೆ: ಅ.27ರಂದು ರಾತ್ರಿ 7ರಿಂದ 8 ಗಂಟೆ ತನಕ ಭಜನಾ ಕಾರ್ಯಕ್ರಮ, ರಾತ್ರಿ 8ಕ್ಕೆ ಗುರುಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.
