ಮಂಗಳೂರು : ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ಮಂಗಳೂರು ದಸರಾ ಮಹೋತ್ಸವದ ನಾಲ್ಕನೇಯ ದಿನ ದಿನಾಂಕ 20.10.2020 ರಂದು ಬೆಳಗ್ಗೆ ಗಂಟೆ 10.00 ಕ್ಕೆ ಭಗವತೀ ದುರ್ಗಾ ಹೋಮ, ಅಪರಾಹ್ನ ಗಂಟೆ 12.30 ಕ್ಕೆ ಪುಷ್ಪಾಲಂಕಾರ ಮಹಾಪೂಜೆ (ಲಲತ ಪಂಚಮಿ) ರಾತ್ರಿ ಗಂಟೆ 7.00 ರಿಂದ 9.00 ರ ವರೆಗೆ ಭಜನಾ ಕಾರ್ಯಕ್ರಮ ಹಾಗು ರಾತ್ರಿ ಗಂಟೆ 9.00 ರಿಂದ ಶ್ರೀ ದೇವಿ ಪುಷ್ಪಾಲಂಕಾರ ಮಾಹಾಪೂಜೆ ಉತ್ಸವ ನಡೆಯಿತು.
ಮಾತೆ ಕೂಷ್ಮಾಂಡ:

ದೇವಿಯ ನಾಲ್ಕನೇ ರೂಪ ಮಾತೆ ಕೂಷ್ಮಾಂಡ. ಇದರ ಅರ್ಥ ಜಗತ್ತಿನ ಸೃಷ್ಟಿಕರ್ತೆ ಎಂದು. ಜಗತ್ತಿನ ಅಣು ಅಣುವಿನಲ್ಲಿ ಚೈತನ್ಯ ತುಂಬಿದ ದೇವಿ ಈಕೆ. ಮಾತೆ ದುರ್ಗೆಯಂತೆ ಹಲವು ಭುಜಗಳನ್ನು ಹೊಂದಿದ ಈಕೆಯೂ ಕೂಡಾ ತನ್ನ ಕೈಗಳಲ್ಲಿ ಆಯುಧ ಹಾಗೂ ಪುಷ್ಪ ಎರಡನ್ನು ಹಿಡಿದು, ಅಪಾರ ತೇಜಸ್ಸಿನೊಂದಿಗೆ, ದಿವ್ಯ ಕಾಂತಿಯೊಂದಿಗೆ ಬೆಳಗುತ್ತಿರುತ್ತಾಳೆ. ನವರಾತ್ರಿಯ ನಾಲ್ಕನೇ ದಿನದ ಆರಾಧನೆ ಕೂಷ್ಮಾಂಡ ದೇವಿಯದ್ದು. ‘ಕುತ್ಸಿತಃ ಉಷ್ಮಾಃ ಕೂಷ್ಮಾಃ’ ಕುತ್ಸಿತಃ ಅಂದರೆ ಸಹಿಸಲು ಕಠಿಣವಾದುದು. ಉಷ್ಮಾ ಎಂದರೆ ಸೂಕ್ಷ್ಮ ಲಹರಿಗಳ ಗೊಂದಲ (ಧ್ವನಿ). ‘ತ್ರಿವಿಧತಾಪಯುಕ್ತಃ ಸಂಸಾರಃ ಸ ಅಂಡೇ ಮಾಂಸಪೇಶ್ಯಾಮ್ ಉದರರೂಪಾಯಾಂ ಯಸಾಃ ಸಾ ಕೂಷ್ಮಾಂಡಾ’ ಅಂದರೆ ತ್ರಿವಿಧತಾಪಗಳೆಂದರೆ ಉತ್ಪತ್ತಿ (ಜನ್ಮ), ಸ್ಥಿತಿ (ಬೆಳವಣಿಗೆ) ಮತ್ತು ಲಯ (ಮೃತ್ಯು). ‘ಮೃತ್ಯು (ಮೋಕ್ಷ) ಅಂದರೆ ಅನಿಶ್ಚಿತ ಕಾಲಾವಧಿಯವರೆಗೆ ವಿಶಿಷ್ಟ ಪದ್ಧತಿಯಿಂದ ನಾಶವಾಗುವುದು’. ‘ಸಂಸಾರ’ವೆಂದರೆ ‘ಪುನಃಪುನಃ’ ಮತ್ತು ‘ಅಂಡಃ’ ಅಂದರೆ ‘ವಿಶಿಷ್ಟ ನಿಯಂತ್ರಣದಿಂದ ಯುಕ್ತವಾಗಿರುವ ಕೋಶ.’ ಮಾಂಸ, ಜೀವಕೋಶಗಳು, ಉದರ ಮತ್ತು ರೂಪ ಇವುಗಳಿಂದ ಯುಕ್ತಸಂಪನ್ನವಾದ ಜೀವಗಳು ಈ ಕೋಶದಲ್ಲಿ ತ್ರಿವಿಧತಾಪಗಳ ಪುನರಾವೃತ್ತಿಯ ಅವಸ್ಥೆಯಿಂದ ಪುನಃಪುನಃ ಹೋಗುತ್ತಾರೆ. ಈ ಪ್ರಕ್ರಿಯೆಯಿಂದ ಬಿಡುಗಡೆ ಹೊಂದಲು ಯಾರ ಕೃಪೆಯ ಅವಶ್ಯಕತೆಯಿದೆಯೋ ಅವಳೇ ಕೂಷ್ಮಾಂಡಿನಿ.