ನಮ್ಮ ದಸರಾ-ನಮ್ಮ ಸುರಕ್ಷೆಗೆ ಆದ್ಯತೆ :ಧಾರ್ಮಿಕ ಸಾಂಸ್ಕೃತಿಕ ವೈಭವ

ಮಾದರಿಯಾಯ್ತು ಮಂಗಳೂರು ದಸರಾ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ‘ಮಂಗಳೂರು ದಸರಾ’ ತನ್ನದೇ ಆದ ವೈಶಿಷ್ಟ್ಯತೆಯನ್ನು ಪಡೆದುಕೊಂಡ ಜಗದ್ವಿಖ್ಯಾತಗೊಂಡಿದೆ. ಧಾರ್ಮಿಕ ಕಾರ್ಯಕ್ರಮಗಳೊಂದಿಗೆ ವಿದ್ಯುದ್ದೀಪಗಳಿಂದ ಝಗಮಗಿಸುವ ದೇಗುಲ, ರಾಜಬೀದಿಗಳು, ಸಾಂಸ್ಕೃತಿಕ ಕಾರ್ಯಕ್ರಮಗಳ ವೈಭವ, ಅನ್ನಪ್ರಸಾದದ ರಸದೌತಣ ಮಂಗಳೂರು ದಸರಾಕ್ಕೆ ಮುಕುಟ ಪ್ರಾಯವಾಗಿದೆ.

ಕೋವಿಡ್ ಸಂಕಷ್ಟದ ಮಧ್ಯೆಯೂ ಈ ವೈಭವಕ್ಕೆ ಕಿಂಚಿತ್ತೂ ಕುಂದು ಬಾರದಂತೆ ಈ ಬಾರಿಯೂ ಮಂಗಳೂರು ದಸರಾವನ್ನು ಒಂದು ಮಾದರಿ ಉತ್ಸವವಾಗಿ ಆಯೋಜಿಸಲಾಗಿದೆ.
ಜಗತ್ತನ್ನೇ ತಲ್ಲಣಗೊಳಿಸಿದ ಕೋವಿಡ್‌ನಿಂದ ಈ ಬಾರಿ ಮಂಗಳೂರು ದಸರಾ ಮಹೋತ್ಸವನ್ನು ಆಯೋಜಿಸುವ ಬಗ್ಗೆ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಆಡಳಿತ ಮಂಡಳಿ ಗೊಂದಲದಲ್ಲಿತ್ತು. ಉತ್ಸವದ ಬಗ್ಗೆ ವಿಶೇಷ ಸಭೆಗಳನ್ನು ನಡೆಸಿ, ಚರ್ಚಿಸಲಾಗಿತ್ತು. ಕೊನೆಗೂ ಕ್ಷೇತ್ರದ ಅಭಿವೃದ್ಧಿಯ ರೂವಾರಿ ಜನಾರ್ದನ ಪೂಜಾರಿ ಅವರ ಅಭಿಲಾಷೆ, ಮಾರ್ಗದರ್ಶನದಂತೆ ಗಣಪತಿ, ನವದುರ್ಗೆ, ಆದಿಶಕ್ತಿ, ಶಾರದಾ ಮೂರ್ತಿ ಪ್ರತಿಷ್ಠಾಪನೆ ನಡೆಸಿಯೇ ಮಂಗಳೂರು ದಸರಾ ಮಹೋತ್ಸವವನ್ನು ಆಚರಿಸಲು ನಿರ್ಧರಿಸಲಾಯಿತು.
ನಮ್ಮ ದಸರಾ-ನಮ್ಮ ಸುರಕ್ಷೆ: ಮಂಗಳೂರು ದಸರಾ ಮಹೋತ್ಸವವನ್ನು ಈ ಬಾರಿ ದಕ್ಷಿಣ ಕನ್ನಡ ಜಿಲ್ಲಾಡಳಿತ ಮಾರ್ಗಸೂಚಿಯನ್ನು ಅನುಸರಿಸಿ ನಮ್ಮ ದಸರಾ-ನಮ್ಮ ಸುರಕ್ಷೆ ಘೋಷವಾಕ್ಯದಡಿ ಆಯೋಜಿಸಲು ನಿರ್ಧರಿಸಲಾಗಿತ್ತು. ಇದಕ್ಕೆ ಪೂರಕವಾದ ಎಲ್ಲ ವ್ಯವಸ್ಥೆಯನ್ನು ಮಾಡಲು ದೇವಸ್ಥಾನದ ಆಡಳಿತ ಮಂಡಳಿ ಮಾಡಿತು.

ಸರತಿ ಸಾಲಿನಲ್ಲಿಯೇ ದರ್ಶನ: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರಕ್ಕೆ ಬರುವ ಭಕ್ತಾದಿಗಳು ಪ್ರಧಾನ ಗೇಟ್‌ನಲ್ಲಿ ಪ್ರವೇಶ ಮಾಡಿ ಸರತಿ ಸಾಲಿನಲ್ಲಿಯೇ ದೇವರ ದರ್ಶನ ಮಾಡಬೇಕಿತ್ತು. ಇದಕ್ಕಾಗಿ ಎರಡು ಕಡೆಗಳಲ್ಲೂ ಡ್ರಿಲ್ ನಿರ್ಮಿಸಲಾಗಿತ್ತು. ಸರತಿ ಸಾಲಿನಲ್ಲಿ ತೆರಳಿದ ಭಕ್ತರು ಸಾಮಾಜಿಕ ಅಂತರ ಕಾಪಾಡಿಕೊಂಡು ನವರಾತ್ರಿ ಉತ್ಸವದ ಮೂರ್ತಿಗಳನ್ನು ಪ್ರತಿಷ್ಠಾಪಿಸಿದ ದರ್ಬಾರು ಮಂಟಪಕ್ಕೆ ತೆರಳಿ ಅಲ್ಲಿ ದೇವರ ದರ್ಶನ ಪಡೆದು ಹೊರ ಬಂದ ಬಳಿಕ ಶ್ರೀ ಕೃಷ್ಣ ಮಂದಿರಕ್ಕೆ ತೆರಳಿ ಅಲ್ಲೂ ದರ್ಶನ ಪಡೆದು, ಶ್ರೀ ಗೋಕರ್ಣನಾಥ ದೇವಸ್ಥಾನ ಪ್ರವೇಶ ವ್ಯವಸ್ಥೆ ಮಾಡಲಾಗಿದೆ. ಗೋಕರ್ಣನಾಥ ದೇವಸ್ಥಾನದೊಳಗಿದ್ದ ಎಲ್ಲ ದೇವರ ದರ್ಶನ ಪಡೆದು, ತೀರ್ಥಪ್ರಸಾದ, ಗಂಧ ಸ್ವೀಕರಿಸಿ ದೇವಳ ಬಲಭಾಗ (ಉತ್ತರ) ಬಾಗಿಲು ಮೂಲಕ ಹೊರ ನಡೆದು ಗಾಜಿನ ಮಂಟಪದಲ್ಲಿ ಸೇವಾ ಪ್ರಸಾದ ಪಡೆದುಕೊಳ್ಳಬೇಕು. ಅಲ್ಲಿಂದ ಸಾಯಿ ಮಂದಿರ, ಹನುಮಾನ್ ಮಂದಿರಕ್ಕೆ ತೆರಳಿ ಭಕ್ತರು ನಿರ್ಗಮನವಾಗುವ ವ್ಯವಸ್ಥೆ ಮಾಡಲಾಗಿದೆ. ನಿರ್ಗಮನ ದ್ವಾರದ ಬಳಿ ಪ್ರತಿನಿತ್ಯ ಮಧ್ಯಾಹ್ನ ಭಕ್ತರಿಗೆ ಅನ್ನಪ್ರಸಾದ ವಿತರಣೆ ನಡೆಯುತ್ತಿದೆ.

ಮಾಸ್ಕ್ ಕಡ್ಡಾಯ, ಮೊಬೈಲ್ ನಿಷಿದ್ಧ: ದೇವಳ ಪ್ರಾಂಗಣದ ದ್ವಾರದಲ್ಲೇ ಸ್ವಯಂಸೇವಕರು ನಿಂತು ಕಡ್ಡಾಯವಾಗಿ ಮಾಸ್ಕ್ ಧರಿಸಿಸುವಂತೆ ಸೂಚನೆ ನೀಡುತ್ತಾರೆ. ಮಾಸ್ಕ್ ಇಲ್ಲದವರಿಗೆ ಪ್ರವೇಶ ಕಡ್ಡಾಯ ನಿಷೇಧವಾಗಿದೆ. ದೇವಸ್ಥಾನ ಪ್ರಾಂಗಣ ಪ್ರವೇಶಿಸುವ ಮೊದಲು ಥರ್ಮಲ್ ಸ್ಕ್ಯಾನ್‌ಗೊಳಪಡಬೇಕು ಮತ್ತು ಸ್ಯಾನಿಟೈಸರ್ ಬಳಕೆ ಸೂಚನೆ ನೀಡಲಾಗುತ್ತಿದೆ. ದೇವಸ್ಥಾನದ ವಠಾರ, ದೇವಾಲಯದೊಳಗೆ, ದರ್ಬಾರು ಮಂಟಪದಲ್ಲಿ ಮೊಬೈಲ್ ಬಳಕೆ, ಫೋಟೋ, ಸೆಲ್ಫಿ ಕಡ್ಡಾಯ ನಿಷೇಧಿಸಲಾಗಿದೆ.

ಧ್ವನಿವರ್ಧಕದಲ್ಲಿ ಉದ್ಘೋಷ: ಜಿಲ್ಲಾಡಳಿತ ಸೂಚನೆ ಮತ್ತು ದೇವಸ್ಥಾನ ಆಡಳಿತ ಮಂಡಳಿಯ ಪ್ರತಿಯೊಂದು ಸೂಚನೆಯನ್ನು ಧ್ವನಿ ವರ್ಧಕ ಮೂಲಕ ಬಿತ್ತರಿಸಿ ಭಕ್ತರಿಗೆ ಸೂಚನೆ ನೀಡಲಾಗುತ್ತಿತ್ತು. ಇದರಿಂದ ದಸರಾ ಮಹೋತ್ಸವದಲ್ಲಿ ಪಾಲ್ಗೊಂಡ ಎಲ್ಲರೂ ನಿಯಮಗಳನ್ನು ಪಾಲಿಸಲು ಅನುಕೂಲವಾಯಿತು.

ವರ್ಚುವಲ್ ಸಾಂಸ್ಕೃತಿಕ ಕಾರ್ಯಕ್ರಮ
ಮಂಗಳೂರು ದಸರಾ ಮಹೋತ್ಸವದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮವೂ ವಿಶೇಷವಾಗಿದ್ದು, ಈ ಬಾರಿ ಕೋವಿಡ್ ಹಿನ್ನಲೆಯಲ್ಲಿ ವರ್ಚುವಲ್ ಮಾದರಿ ಸಾಂಸ್ಕೃತಿ ಕಾರ್ಯಕ್ರಮ ಬಿತ್ತರಿಸಲಾಯಿತು. ಕ್ಷೇತ್ರದ ಜಯ ಸಿ. ಸುವರ್ಣ ಸಭಾಭವನದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ ನಡೆದಿದ್ದು, ಅಲ್ಲಿಗೆ ಕಲಾವಿದರಿಗೆ ಮಾತ್ರ ಪ್ರವೇಶಕ್ಕೆ ಅವಕಾಶ ನೀಡಲಾಗಿದೆ. ಈ ಕಾರ್ಯಕ್ರಮವನ್ನು ನಮ್ಮ ಕುಡ್ಲ ವಾಹಿನಿ ಸೇರಿದಂತೆ 4 ಸಾಮಾಜಿಕ ಜಾಲತಾಣದಲ್ಲಿ ನೇರ ಪ್ರಸಾರ ಮಾಡಲಾಗಿದೆ. ದೇವಳದ ಎಡಭಾಗದಲ್ಲಿರುವ ಸಂತೋಷಿ ಕಲಾ ಮಂಟಪ ಮತ್ತು ದೇವಳ ಎದುರು ಭಾಗದಲ್ಲಿ ಭಾರೀ ಗಾತ್ರದ ಎಲ್‌ಇಡಿ ಸ್ಕ್ರೀನ್ ಅಳವಡಿಸಿ ಅದರ ಮುಖೇನ ಸಾಂಸ್ಕೃತಿಕ ಕಾರ್ಯಕ್ರಮ ವೀಕ್ಷಣೆಗೆ ಅವಕಾಶ ಮಾಡಲಾಗಿದೆ. ಇದು ಭಕ್ತಾದಿಗಳ ಶ್ಲಾಘನೆಗೆ ಪಾತ್ರವಾಗಿದೆ.

ನಿತ್ಯ 150ಮಂದಿ ಸ್ವಯಂಸೇವಕರು
ಮಂಗಳೂರು ದಸರಾ ಮಹೋತ್ಸವ ಮಾದರಿಯಾಗಿ ನಡೆಯಬೇಕಾದರೆ ಅದರಲ್ಲಿ ಸ್ವಯಂಸೇವಕರ ಪಾತ್ರ ಹಿರಿದಾಗಿದೆ. ದಸರಾ ಪ್ರಾರಂಭಕ್ಕೆ ಮುನ್ನವೇ ಗೋಕರ್ಣನಾಥ ಸೇವಾದಳದ ಸದಸ್ಯರು ದೇವಳ ವಠಾರ ಶುಚಿತ್ವದಿಂದ ಹಿಡಿದು ಪ್ರತಿಯೊಂದು ಕೈಂಕರ್ಯದಲ್ಲಿ ಕೈಜೋಡಿಸಿದರು. ಇದು ಮಾತ್ರವಲ್ಲದೆ ದಸರಾ ಪ್ರಾರಂಭ ದಿನದಿಂದಲೂ ಬಿಲ್ಲವ ಯುವ ವೇದಿಕೆ ಉಡುಪಿ, ಬಿರುವೆರ್ ಕುಡ್ಲ, ಯುವವಾಹಿನಿ ನಾನಾ ಘಟಕ, ನಾರಾಯಣಗುರು ಸೇವಾ ಸಂಘಗಳು, ಆತ್ಮಶಕ್ತಿ ಬ್ಯಾಂಕ್, ನಾನಾ ವಿದ್ಯಾರ್ಥಿ ಸಂಘಟನೆ ಸೇರಿದಂತೆ ಉಡುಪಿ, ದಕ್ಷಿಣ ಕನ್ನಡ ಜಿಲ್ಲೆಯ ಬಿಲ್ಲವ ಸಂಘಗಳು ಸೇರಿದಂತೆ ನಾನಾ ಸಂಘಟನೆಗಳ ಸದಸ್ಯರು ಸ್ವಯಂಸೇವಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಅನ್ನದಾನ, ಉಪಹಾರ ವ್ಯವಸ್ಥೆ ಪ್ರಸಾದ ತಯಾರಿ ಮತ್ತು ವಿತರಣೆ, ಸೇವಾ ಕೌಂಟರ್, ಪ್ರಧಾನ ಗೇಟ್‌ನಲ್ಲಿ ತಪಾಸಣೆ, ಭದ್ರತೆ, ಪಾರ್ಕಿಂಗ್ ಸೇರಿದಂತೆ ಪ್ರತಿಯೊಂದು ಕಡೆಯಲ್ಲಿಯೂ ಸ್ವಯಂಸೇವಕರನ್ನು ಅಚ್ಚುಕಟ್ಟಾಗಿ ನಿಯೋಜಿಸಲಾಗಿದೆ.

ಭಕ್ತರನ್ನು ತಣಿಸಿದ ಅನ್ನಪ್ರಸಾದ ವ್ಯವಸ್ಥೆ
ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನದಲ್ಲಿ ಅನ್ನದಾನ ವಿಶೇಷ ಸೇವೆಯಾಗಿದ್ದು, 1990ರಿಂದ ನಿತ್ಯ ಅನ್ನದಾನವನ್ನು ಪ್ರಾರಂಭಿಸಿದೆ. ವರ್ಷದ 2 ದಿನ ಹೊರತುಪಡಿಸಿ ಪ್ರತಿನಿತ್ಯವೂ ಇಲ್ಲಿ ಅನ್ನದಾನ ಸೇವೆ ನಡೆಯುತ್ತಿದೆ. ಇದನ್ನು ಈ ಬಾರಿಯ ಕೋವಿಡ್ ವಿಷಮ ಪರಿಸ್ಥಿತಿಯಲ್ಲೂ ಮುಂದುವರಿಸಲಾಗಿದೆ.

ಪ್ರತಿನಿತ್ಯ ಮಧ್ಯಾಹ್ನ 12.30ರಿಂದ 2.30ರತನಕ ದೇವಸ್ಥಾನದ ನಿರ್ಗಮನ ದ್ವಾರದಲ್ಲಿ ಅನ್ನಪ್ರಸಾದ ಪ್ಯಾಕೇಟ್ ವಿತರಿಸಲಾಗುತ್ತಿದೆ.

ಶಿಸ್ತು ಬದ್ಧ ಸ್ವಯಂಸೇವಕರ ತಂಡ ಉಣಬಡಿಸುವ ಶುಚಿ ರುಚಿಯಾದ ಸುರಕ್ಷಿತ ಅನ್ನದಾನ ಸೇವೆ ಭಕ್ತರ ಮೆಚ್ಚುಗೆಗೆ ಪಾತ್ರವಾಗಿದೆ. ಅನ್ನಪ್ರಸಾದ ತಯಾರಿಕೆಯಿಂದ ಹಿಡಿದು, ಹಾಳೆಯ ಬೌಲ್‌ನಲ್ಲಿ ಪ್ಯಾಕ್ ಮಾಡುವವರೆಗೂ ಸುರಕ್ಷತಾ ನಿಯಮ ಪಾಲಿಸಿಕೊಂಡು ಬರಲಾಗುತ್ತಿದೆ.

ಹಾಳೆಯ ಬೌಲ್‌ಗಳನ್ನು ನೀರಿನಲ್ಲಿ ತೊಳೆದು, ಪ್ರಸಾದ ಪ್ಯಾಕ್ ಮಾಡುವವರಿಗೆ ಮುಖಕ್ಕೆ ಮಾಸ್ಕ್, ಫೇಸ್ ಶೀಲ್ಡ್, ಕೈಗೆ ಗ್ಲೌಸ್ ಕಡ್ಡಾಯಗೊಳಿಸಲಾಗಿದೆ. ದೇವಸ್ಥಾನದ ಆವರಣದಿಂದ ಹಿಡಿದು ಅನ್ನಪಪ್ರಸಾದ ತಯಾರು ಮಾಡುವವರೆಗೂ ಶುಚಿತ್ವಕ್ಕೆ ಮೊದಲ ಪ್ರಾಶಸ್ತ್ಯ ನೀಡಲಾಗುತ್ತಿದೆ.

ವರದಿ : ಚಾರ್ವಿ ವಿ. ಕೋಟ್ಯಾನ್ ಪಡು

Leave a Comment

Your email address will not be published. Required fields are marked *

You cannot copy content of this page

Scroll to Top