ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರ : ಮಂಗಳೂರು ದಸರಾ ಮಹೋತ್ಸವ

ನವರಾತ್ರಿಯ ಎರಡನೇ ದಿನ: ದುರ್ಗಾಮಾತೆ ಬ್ರಹ್ಮಚಾರಿಣಿ ಪೂಜಿ

ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದಸರಾ ಮಹೋತ್ಸವದ ಎರಡನೇ ದಿನವಾದ ಆದಿತ್ಯವಾರ 18.10.2020 ರಂದು ಬೆಳಗ್ಗೆ 10ಕ್ಕೆ ದುರ್ಗಾ ಹೋಮ, ಅಪರಾಹ್ನ 12.30 ಕ್ಕೆ ಪುಷ್ಪಾಲಂಕಾರ, ಮಹಾಪೂಜೆ, ರಾತ್ರಿ 7ರಿಂದ 9ರವರೆಗೆ ಭಜನಾ ಕಾರ್ಯಕ್ರಮ , 9ರಿಂದ ಶ್ರೀ ದೇವಿ ಪುಷ್ಪಾಲಂಕಾರ, ಮಹಾಪೂಜೆ, ಬಲಿ ಉತ್ಸವ ನೆರವೇರಿತು.

ಬ್ರಹ್ಮಚಾರಿಣಿ :

ದುರ್ಗಾಮಾತೆ ಬ್ರಹ್ಮಚಾರಿಣಿ ಸ್ವರೂಪವನ್ನು ಪೂಜಿಸಲಾಗುತ್ತದೆ. ಇಲ್ಲಿ ಬ್ರಹ್ಮ ಎಂಬ ಪದದ ಅರ್ಥ ತಪಸ್ಸು. ಬ್ರಹ್ಮಚಾರಿಣಿ ಎಂದರೆ ತಪಸ್ಸು ಮಾಡುವುದು. ಎಲ್ಲಾ ಮಾನವರಂತೆ, ಸತಿ ದೇವಿಯು ಎರಡನೇ ಜನ್ಮದಲ್ಲಿ ಶೈಲಪುತ್ರಿ ಸ್ಥಾನ ಪಡೆದಾಗ ಆಕೆಗೆ ಹಿಂದಿನ ಜನ್ಮದ ಯಾವುದೇ ಘಟನೆ ನೆನಪಿರಲಿಲ್ಲ. ಮತ್ತೊಂದೆಡೆ, ಭಗವಾನ್ ಶಂಕರ ಅವರ ಮೊದಲ ಪತ್ನಿ ಸತಿಗಾಗಿ ಶೋಕದಲ್ಲಿ ಮುಳುಗಿದ್ದರು. ಆಗ ದೇವರುಗಳು ಶಿವನನ್ನು ಶೋಕದಿಂದ ಹೊರಗೆ ತರಲು ಶೈಲಪುತ್ರಿಯನ್ನು ಶಿವನ ಹೆಂಡತಿಯನ್ನಾಗಿ ಮಾಡಲು ಯೋಚಿಸಿದರು. ಶೈಲಪುತ್ರಿಯ ಬಳಿ ಶಿವನನ್ನು ವಿವಾಹವಾಗುವಂತೆ ನಾರದರು ಕೇಳುತ್ತಾರೆ. ಆಗ ಶೈಲಪುತ್ರಿಯು ಸಾವಿರಾರು ವರ್ಷಗಳ ಕಾಲ ಕಠಿಣ ತಪಸ್ಸನ್ನು ಮಾಡಿ ಶಿವನನ್ನು ವಿವಾಹವಾಗುತ್ತಾಳೆ. ಶೈಲಪುತ್ರಿಯು ಸಂಯಮದಿಂದ ಕಠಿಣ ತಪಸ್ಸನ್ನು ಆಚರಿಸಿದ ಕಾರಣ ಆಕೆಯನ್ನು ಬ್ರಹ್ಮಚಾರಿಣಿ ಎಂದು ಕರೆಯಲಾಗುತ್ತದೆ. ದುರ್ಗಾ ದೇವಿಯ ಈ ಬ್ರಹ್ಮಚಾರಿಣಿ ರೂಪವು ಬಲಗೈಯಲ್ಲಿ ಜಪಿಸುವ ಹಾರವನ್ನು ಮತ್ತು ಎಡಗೈಯಲ್ಲಿ ಕಮಂಡಲವನ್ನು ಹಿಡಿದಿದ್ದಾಳೆ. ಅವರನ್ನು ಆರಾಧಿಸುವ ಮಾನವರು ಕಠಿಣ ಸಂದರ್ಭದಲ್ಲೂ ಯಶಸ್ಸನ್ನು ಸಾಧಿಸುವರು.

ಬ್ರಹ್ಮಚಾರಿಣಿ ಪೂಜೆಯ ಮಹತ್ವ:

ಬ್ರಹ್ಮಚಾರಿಣಿ ದೇವಿಯ ಆರಾಧನೆಯು ಸ್ಥಿರತೆ, ತ್ಯಾಗ, ಶಾಂತಚಿತ್ತ, ಸದ್ಗುಣ, ಸ್ವನಿಯಂತ್ರಣದ ಹೆಚ್ಚಳಕ್ಕೆ ಕಾರಣವಾಗುತ್ತದೆ. ಜೀವನದಲ್ಲಿ ಎದುರಾಗುವ ಕಷ್ಟದ ಸಮಯದಲ್ಲೂ ಮನಸ್ಸು ಕರ್ತವ್ಯದಿಂದ ವಿಮುಖವಾಗುವುದಿಲ್ಲ. ದೇವಿಯ ಆರಾಧನೆಯು ಮನಸ್ಸಿನಲ್ಲಿರುವ ಕೆಟ್ಟ ಗುಣ, ಕಲ್ಮಶ ಮತ್ತು ದೋಷಗಳನ್ನು ನಿವಾರಿಸುತ್ತದೆ. ಬ್ರಹ್ಮಚಾರಿಣಿ ದೇವಿಯ ಕೃಪೆಯಿಂದ ಸಂಪೂರ್ಣ ಸಾಧನೆ ಮತ್ತು ವಿಜಯವನ್ನು ಸಾಧಿಸುವಿರಿ.

ಧರ್ಮಗ್ರಂಥಗಳ ಪ್ರಕಾರ ಬ್ರಹ್ಮಚಾರಿಣಿಯು ಮಂಗಳ ಗ್ರಹದ ಅಧಿಪತಿ. ತನ್ನ ಭಕ್ತರಿಗೆ ಅದೃಷ್ಟವನ್ನು ನೀಡುವವಳು ಹಾಗೂ ಮಾನಸಿಕ ಕ್ಷೋಭೆಯನ್ನು ಪರಿಹರಿಸಿ ನೆಮ್ಮದಿಯನ್ನು ದಯಪಾಲಿಸುವವಳೂ ಬ್ರಹ್ಮಚಾರಿಣಿ. ಜನ್ಮ ಕುಂಡಲಿಯಲ್ಲಿ ಮಂಗಳ ಗ್ರಹವು ಕೆಟ್ಟ ಸ್ಥಾನದಲ್ಲಿದ್ದರೆ ಹಾಗೂ ಮಂಗಳ ದೋಷವಿದ್ದರೆ ಬ್ರಹ್ಮಚಾರಿಣಿಯನ್ನು ಪೂಜಿಸುವುದು ಒಳ್ಳೆಯದು.

ಬ್ರಹ್ಮಚಾರಿಣಿಯ ಪೂಜೆ:

ಬ್ರಹ್ಮಚಾರಿಣಿಗೆ ಬಹಳ ಇಷ್ಟವಾದ ಹೂವು ಮಲ್ಲಿಗೆ. ಹಾಗಾಗಿ ನವರಾತ್ರಿಯ ಎರಡನೇ ದಿನ ಮಲ್ಲಿಗೆಯಿಂದ ಈಕೆಯನ್ನು ಅಲಂಕರಿಸಿ. ಪೂಜಿಸಿ, ಮಾತೆಯ ಆಶೀರ್ವಾದವನ್ನು ಪಡೆದುಕೊಳ್ಳಿ. ಬ್ರಹ್ಮಚಾರಿಣಿಯ ಪೂಜೆಯನ್ನು ಮಾಡುವಾಗ 16 ವಿಧದ ಅರ್ಪಣೆಗಳನ್ನು ಮಾಡಿ, ಆರತಿಯೊಂದಿಗೆ ಪೂಜೆಯನ್ನು ಅಂತ್ಯಗೊಳಿಸಿ.

ಬ್ರಹ್ಮಚಾರಿಣಿ ಮಂತ್ರ:

ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ಓಂ ದೇವಿ ಬ್ರಹ್ಮಚಾರಿಣಿಯೇ ನಮಃ
ದಾಧನಾ ಕರ್‌ ಪದ್ಮಭಯಮಕ್ಷಾಮಾಲಾ ಕಮಂಡಲೋ ದೇವೀ ಪ್ರಸಾದಿತು ಮಯಿ ಬ್ರಹ್ಮಚಾರಿಣಿಯನುತ್ತಮ.

ಬ್ರಹ್ಮಚಾರಿಣಿಯ ಆರಾಧನೆಯು ತಪಸ್ಸಿಗೆ ಸಮವಾಗಿರುತ್ತದೆ. ಭಕ್ತರಲ್ಲಿರುವ ದುರ್ಗುಣಗಳು ಕಳೆದು ಉದಾತ್ತತೆ, ಸದ್ಗುಣಗಳು ಬೆಳೆಯುತ್ತದೆ. ಯಶಸ್ಸಿಗೆ ಅಡ್ಡಲಾಗಿರುವ ಎಲ್ಲಾ ತೊಡಕುಗಳೂ ಸರಿದು ಮನಸ್ಸಿಗೆ ಶಾಂತಿ ಹಾಗೂ ಮಾಡುವ ಎಲ್ಲಾ ಕೆಲಸದಲ್ಲೂ ನೆಮ್ಮದಿ ದೊರೆಯುವುದು. ಹಾಗಾಗಿ ನವರಾತ್ರಿಯ ಎರಡನೆ ದಿನ ಬ್ರಹ್ಮಚಾರಿಣಿಯನ್ನು ಪೂಜಿಸಿ, ಮಾತೆಯ ಆಶೀರ್ವಾದ ಪಡೆಯಿರಿ.

ಬ್ರಹ್ಮಚಾರಿಣಿಯ ಸ್ತುತಿ:

ಯಾ ದೇವಿ ಸರ್ವ ಭೂತೇಷು ಬ್ರಹ್ಮಚಾರಿಣಿ ರೂಪೇಣ ಸಂಸ್ಥಿತಾ ನಮಸ್ತಸ್ಯೈ ನಮಸ್ತಸ್ಯೈ ನಮಸ್ತಸ್ಯೈ ನಮೋ ನಮಃ
ಸರ್ವರಿಗೂ ಶುಭವಾಗಲಿ

Leave a Comment

Your email address will not be published. Required fields are marked *

You cannot copy content of this page

Scroll to Top