ಪ್ರಚಲಿತ ದಿನಗಳಲ್ಲಿ ನಮ್ಮನ್ನು ಮೀರಿ ನಿಂತ ಬಹುದೊಡ್ಡ ವ್ಯಕ್ತಿ ಜಯ ಸಿ. ಸುವರ್ಣರು. ಅವರು ಮತ್ತು ಜನಾರ್ದನ ಪೂಜಾರಿ ಒಂದೇ ದೇಹದ ಎರಡು ಕೈಗಳಂತೆ ಸಮಾಜ ಕಟ್ಟಲು ಶ್ರಮಿಸಿದವರು. ಇವರಿಬ್ಬರ ಆದರ್ಶವನ್ನು ನಾವು ಜೀವನದಲ್ಲಿ ಅಳವಡಿಸಲು ಪ್ರಯತ್ನಿಸಬೇಕು ಎಂದು ದ.ಕ ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದರು.
ಕುದ್ರೋಳಿ ಗೋಕರ್ಣನಾಥ ಕ್ಷೇತ್ರಾಡಳಿತ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಗುರುವಾರ ಕರ್ಮಯೋಗಿ, ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ಸಮಿತಿ ಅಧ್ಯಕ್ಷ, ಬಿಲ್ಲವ ಮಹಾಮಂಡಲ ಮಾಜಿ ಅಧ್ಯಕ್ಷ ಜಯ ಸಿ. ಸುವರ್ಣರ ಶ್ರದ್ಧಾಂಜಲಿ ಸಭೆಯಲ್ಲಿ ಮಾತನಾಡಿದರು.
ಜನಾರ್ದನ ಪೂಜಾರಿ ಈಗ ಚೆನ್ನಯ್ಯನನ್ನು ಕಳೆದುಕೊಂಡ ಕೋಟಿಯಂತೆ ಭಾವುಕರಾಗಿದ್ದಾರೆ. ಅವರಿಬ್ಬರ ಸಂಬಂಧ ಕೋಟಿ ಚೆನ್ನಯ್ಯರಂತೆ ಸೋದರತ್ವದ ಸಂಕೇತವಾಗಿತ್ತು. ಬಡತನದಲ್ಲಿ ಹುಟ್ಟಿ ಬೆಳೆದು ಬಳಿಕ ಲಕ್ಷಾಂತರ ಬಿಲ್ಲವರು ಸೇರಿ, ಇತರ ವರ್ಗದವರಿಗೆ ಸಹಾಯ ಮಾಡಿದ್ದರು. ಸಿಕ್ಕಿದಷ್ಟು ದಿನ ಬಡವರಿಗೆ ಆಸರೆಯಾಗಬೇಕು ಎನ್ನುವುದು ಜಯ ಸಿ. ಸುವರ್ಣರ ನಿಲುವು ಎಲ್ಲರಿಗೂ ಮಾದರಿ. ಸಹಸ್ರಾರು ಬಡವರಿಗೆ ಉದ್ಯೋಗ ನೀಡಿದವರು. ಪ್ರೀತಿಯನ್ನು ಹಂಚಿಕೊಂಡವರು. ಅವರು ಶತಮಾನಕ್ಕೆ ಬೇಕಾಗುವಷ್ಟು ಸಾಧಿಸಿದ್ದಾರೆ ಎಂದು ಗುಣಗಾನ ಮಾಡಿದರು.

ಕುದ್ರೋಳಿ ಕ್ಷೇತ್ರದ ಅಭಿವೃದ್ಧಿ ರೂವಾರಿ, ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಮಾತನಾಡಿ, ಜಯ ಸಿ. ಸುವರ್ಣರು ನಮ್ಮನ್ನು ಅಗಲಿದರೂ ಅವರು ಪ್ರತಿದಿನವೂ ನಮ್ಮೊಟ್ಟಿಗೆ ನಿಲ್ಲುತ್ತಾರೆ. ಬಿಲ್ಲವ ಸಮಾಜವನ್ನು ಕೈಹಿಡಿದು ಮೇಲೆ ತಂದ ಶಕ್ತಿ ಜಯ ಸಿ. ಸುವರ್ಣರದ್ದು. ನನಗೆ ಪ್ರತಿಯೊಂದು ಸಂದರ್ಭದಲ್ಲೂ ನನಗೆ ಹಾಗೂ ಸಮಾಜಕ್ಕೆ ಬೆನ್ನೆಲುಬಾಗಿದ್ದರು. ಅವರು ಇಡೀ ಜಗತ್ತಿಗೆ ಛಾಯೆಯನ್ನು ಬಿಟ್ಟು ಹೋಗಿದ್ದಾರೆ. ತಮ್ಮ ನಗುಮುಖದಿಂದಲೇ ಎಲ್ಲ ಕೆಲಸಗಳನ್ನು ಮಾಡುತ್ತಿದ್ದರು, ಪೂಜಾರಿಯಿಂದ ಆ ರೀತಿ ಕೆಲಸ ಮಾಡಲು ಸಾಧ್ಯವಿಲ್ಲ ಎಂದರು.
ನಮ್ಮ ಸಮಾಜವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ಹಾಗೂ ಶಕ್ತಿ ಕೋಟ ಶ್ರೀನಿವಾಸ ಪೂಜಾರಿಯವರ ಮೇಲಿದೆ ಎಂದರು.
ಕ್ಷೇತ್ರದ ಕೋಶಾಧಿಕಾರಿ ಪದ್ಮರಾಜ್ ಆರ್. ಮಾತನಾಡಿ, ನಮ್ಮ ಹಿರಿಯರು ಸಮಾಜಕ್ಕೆ ನೀಡಿದ ಕೊಡುಗೆ, ಜಯ ಸಿ. ಸುವರ್ಣರ ಆದರ್ಶವನ್ನು ಮುಂದುವರಿಸಿಕೊಂಡು ಹೋಗುವ ಜವಾಬ್ದಾರಿ ನಮ್ಮದಾಗಬೇಕು. ನಮ್ಮಲ್ಲಿ ಏನೇ ಮನಸ್ತಾಪ ಇದ್ದರೂ ಅದನ್ನು ದೂರ ಮಾಡಿ ಸಮಾಜದ ಏಳಿಗೆಗೆ ಶ್ರಮಿಸುವುದೇ ನಾವು ಜಯ ಸಿ. ಸುವರ್ಣರಿಗೆ ನೀಡುವ ದೊಡ್ಡ ಶ್ರದ್ಧಾಂಜಲಿ ಎಂದರು.
ಕ್ಷೇತ್ರದ ಅಧ್ಯಕ್ಷ ಎಚ್.ಎಸ್.ಸಾಯಿರಾಂ, ಕಾರ್ಯದರ್ಶಿ ಬಿ.ಮಾಧವ ಸುವರ್ಣ, ಟ್ರಸ್ಟಿಗಳಾದ ರವಿಶಂಕರ ಮಿಜಾರ್, ಕೆ.ಮಹೇಶ್ಚಂದ್ರ, ಕ್ಷೇತ್ರದ ಅಭಿವೃದ್ಧಿ ಸಮಿತಿ ಸದಸ್ಯರಾದ ಶೇಖರ್ ಪೂಜಾರಿ, ರಾಧಾಕೃಷ್ಣ, ಉದ್ಯಮಿ ಶೈಲೇಂದ್ರ ಸುವರ್ಣ, ನಮ್ಮ ಕುಡ್ಲ ನಿರ್ದೇಶಕ ಲೀಲಾಕ್ಷ ಕರ್ಕೇರ ಮಾಜಿ ಶಾಸಕ ಜೆ.ಆರ್ ಲೋಬೋ ಮೊದಲಾದವರು ಉಪಸ್ಥಿತರಿದ್ದರು.
ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.
1 thought on “ಜಯ ಸಿ. ಸುವರ್ಣ ಶ್ರದ್ಧಾಂಜಲಿ ಸಭೆಯಲ್ಲಿ ಕೋಟ ಶ್ರೀನಿವಾಸ ಪೂಜಾರಿ ಕರೆ”
ಹಿರಿಯ ಚೇತನ ಜಯ ಸಿ ಸುವರ್ಣರ ಆದರ್ಶ ಗಳು ಯುವ ಜನತೆಗೆ ಪ್ರೇರಣೆಯಾಗಬೇಕು ಎಂಬ ಆಶಯ.. ಓಂ ಶಾಂತಿ..