ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದಲ್ಲಿ ನಡೆಯುತ್ತಿರುವ ಮಂಗಳೂರು ‘ದಸರಾ ಮಹೋತ್ಸವ’ ಅಂಗವಾಗಿ ಈ ಬಾರಿ ದಸರಾ ಶೋಭಾಯಾತ್ರೆಯ ಬದಲು ಬ್ರಹ್ಮಶ್ರೀ ನಾರಾಯಣ ಗುರುಗಳ ಭಾವಚಿತ್ರವನ್ನು ಸಾಂಕೇತಿಕವಾಗಿ ರಾಜಬೀದಿಯಲ್ಲಿ ನಗರ ಪ್ರದಕ್ಷಿಣೆ ನಡೆಸಲು ಎಂದು ದೇವಳ ಆಡಳಿತ ಮಂಡಳಿ ನಿರ್ಧರಿಸಿದೆ.
ಕುದ್ರೋಳಿ ಕ್ಷೇತ್ರದಿಂದ ಅಕ್ಟೋಬರ್.26ರಂದು ಸಂಜೆ 6ಗಂಟೆಗೆ ನಾರಾಯಣ ಗುರು ಭಾವಚಿತ್ರವಿರುವ ಟ್ಯಾಬ್ಲೋ ಹೊರಡಲಿದ್ದು, ವಾಹನದಲ್ಲಿ ಸೀಮಿತ ಭಕ್ತಾದಿಗಳು ಮಾತ್ರ ಭಾಗವಹಿಸಲಿದ್ದಾರೆ. ಈ ಟ್ಯಾಬ್ಲೋ ಕಂಬಳ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಭಾಗ್, ಬಲ್ಲಾಳ್‌ಬಾಗ್, ಪಿವಿಎಸ್, ನವಭಾರತ್ ಸರ್ಕಲ್, ಕೆ.ಎಸ್. ರಾವ್ ರಸ್ತೆ, ಪಿಎಂ ರಾವ್ ರೋಡ್ ಮಾರ್ಗವಾಗಿ ಶ್ರೀ ವೆಂಕಟರಮಣ ದೇವಸ್ಥಾನದ ಮುಂಭಾಗಕ್ಕೆ ಬಂದು ವಿ.ಟಿ. ರಸ್ತೆ ಮೂಲಕ ನವಭಾರತ್ ಸರ್ಕಲ್‌ಗೆ ಮರಳಿ ಚಿತ್ರಾ ಟಾಕೀಸು, ಅಳಕೆಯಾಗಿ ಶ್ರೀ ಕ್ಷೇತ್ರಕ್ಕೆ ಆಗಮಿಸಲಿದೆ ಎಂದು ಪ್ರಕಟಣೆ ತಿಳಿಸಿದೆ.

ನಾಳೆ ಕಾರ್ಯಕ್ರಮಗಳು: ಅ.26ರ ಸೋಮವಾರದಂದು ಬೆಳಗ್ಗೆ 10.00ಕ್ಕೆ ವಾಗೀಶ್ವರಿ ದುರ್ಗಾ ಹೋಮ, 1.00ಕ್ಕೆ ಶಿವಪೂಜೆ, 1.15ಕ್ಕೆ ಶ್ರೀ ದೇವಿ ಪುಷ್ಪಾಲಂಕಾರ ಮಹಾಪೂಜೆ, ಉತ್ಸವ, ರಾತ್ರಿ 7.30ರಿಂದ ಪುಷ್ಕರಣಿಯಲ್ಲಿ ಪೂಜೆ ಬಲಿ, ಮಂಟಪ ಬಲಿ, ಮಂಟಪ ಪೂಜೆ, ನವದುರ್ಗೆ, ಶ್ರೀಶಾರದಾ ವಿಸರ್ಜನೆ, ಅವಭೃತ ಸ್ನಾನ ನಡೆಯಲಿದೆ.
ಅ.27ರಂದು ರಾತ್ರಿ 7.00ರಿಂದ 8.00 ಭಜನಾ ಕಾರ್ಯಕ್ರಮ, ರಾತ್ರಿ 8.00ಕ್ಕೆ ಗುರುಪೂಜೆ ನಡೆಯಲಿದೆ ಎಂದು ಕ್ಷೇತ್ರದ ಪ್ರಕಟಣೆ ತಿಳಿಸಿದೆ.